ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಸಿಬಿಐ (CBI) ತನಿಖೆಗೆ ನೀಡಿದ್ದ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ, ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದೆ.
ಇತ್ತೀಚೆಗೆ ಬಿಜೆಪಿ ಶಾಸಕ ಯತ್ನಾಳ್ ಈ ಕುರಿತು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗುವ ಬಗ್ಗೆ ಕೋರ್ಟ್ ಸಿಬಿಐ ಅಭಿಪ್ರಾಯ ಕೇಳಿತ್ತು. ಕೋರ್ಟ್ ಅಭಿಪ್ರಾಯ ಕೇಳಿದ್ದ ಹಿನ್ನೆಲೆಯಲ್ಲಿ ಸಿಬಿಐ ಅರ್ಜಿ ಸಲ್ಲಿಕೆ ಮಾಡಿದೆ.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಿಬಿಐ (CBI) ತನಿಖೆಗೆ ನೀಡಿದ. ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ (Basanagouda Patil Yatnal) ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸಿಬಿಐಗೆ ನೋಟಿಸ್ ನೀಡಿತ್ತು.
ರಾಜ್ಯ ಸರ್ಕಾರ ನೀಡಿರುವ ಲೋಕಾಯುಕ್ತ ತನಿಖೆಗೆ ತಡೆ ನೀಡಬೇಕು ಮತ್ತು ಸರ್ಕಾರ ಮಾಡಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ಯತ್ನಾಳ್ ಪರ ವಕೀಲರು ವಾದಿಸಿದ್ದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಲೋಕಾಯುಕ್ತದಲ್ಲಿ ತನಿಖೆ ಮುಂದುವರೆಸಬಹುದು. ಆದರೆ, ಈ ಸಮಸ್ಯೆ ಸುಪ್ರೀಂಕೋರ್ಟ್‍ನಲ್ಲಿ ಬಗೆಹರಿಯುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಹೀಗಾಗಿ ಯತ್ನಾಳ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈಗ ಸಿಬಿಐ ಕೂಡ ಅರ್ಜಿ ಸಲ್ಲಿಕೆ ಮಾಡಿದ್ದು, ಡಿಕೆಶಿ ಆತಂಕ ಶುರುವಾಗಿದೆ.








