ಬೆಂಗಳೂರು: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಈ ವೇಳೆ ರಾಮನಗರ (Ramanagara) ಜಿಲ್ಲೆಯಲ್ಲಿ ಆಪರೇಷನ್ ಆಲೌಟ್ ಜೆಡಿಎಸ್ (JDS) ಮಾಡುವ ಶಪಥು ಮಾಡಿದ್ದಾರೆ.
ಈ ಮೂಲಕ ಸಿಪಿ ಯೋಗೇಶ್ವರ್ (CP Yogeshwar ) ಜೆಡಿಎಸ್ ಗೆ ಟಾಂಗ್ ಕೊಟ್ಟಿದ್ದಾರೆ. ಯೋಗೇಶ್ವರ್ ಅವರ ಮನವೊಲಿಸಲು ಯಶಸ್ವಿಯಾದ ಡಿಕೆ ಸಹೋದರರು. ಸಿಎಂ ಅವರನ್ನು ಭೇಟಿ ಮಾಡಿಸಿದರು. ಡಿಕೆಶಿ ಹಾಗೂ ಯೋಗೇಶ್ವರ್ ಒಂದೇ ಕಾರಿನಲ್ಲಿ ಸಿಎಂ ನಿವಾಸಕ್ಕೆ ಬಂದರು. ಈ ವೇಳೆ ಸಿಎಂ ಎದುರು ಯೋಗೇಶ್ವರ್ ಪಕ್ಷ ಸೇರಲು ಒಪ್ಪಿಗೆ ಸೂಚಿಸಿದರು.
ಈ ವೇಳೆ ಯೋಗೇಶ್ವರ್, ಈ ಚುನಾವಣೆ ನನ್ನ ಸೋಲು ಹಾಗೂ ಗೆಲುವಿನದ್ದಲ್ಲ. ಇದು ಆಪರೇಷನ್ ಆಲೌಟ್ ಎಂದು ಹೇಳಿದ್ದಾರೆ. ಈ ಮೂಲಕ ರಾಮನಗರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಜೆಡಿಎಸ್ ಆಲೌಟ್ ಮಾಡುವ ಕುರಿತು ಮಾತನಾಡಿದ್ದಾರೆ.
ರಾಮನಗರದಲ್ಲಿ ಒಟ್ಟು 4 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕನಕಪುರದಲ್ಲಿ ಡಿಕೆ ಶಿವಕುಮಾರ್, ಮಾಗಡಿಯಲ್ಲಿ ಬಾಲಕೃಷ್ಣ, ರಾಮನಗರದಲ್ಲಿ ಇಕ್ಬಾಲ್ ಹುಸೇನ್ ಇದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಇದ್ದರು. ಈಗ ಕಾಂಗ್ರೆಸ್ ಆ ಕ್ಷೇತ್ರದ ಮೇಲೆಯೂ ಕಣ್ಣಿಟ್ಟಿದೆ.
2018ರ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರದಲ್ಲಿ ಗೆದ್ದ ನಂತರ ರಾಮನಗರ ಕ್ಷೇತ್ರಕ್ಕೆ ಹೆಚ್ಡಿಕೆ ರಾಜೀನಾಮೆ ನೀಡಿದ್ದರು. ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಜಯಗಳಿಸಿದ್ದರು. ಆದರೆ, 2023ರಲ್ಲಿ ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸೋತಿದ್ದರು. ಕುಮಾರಸ್ವಾಮಿ ಚನ್ನಪಟ್ಟಣದಿಂದ ಗೆದ್ದಿದ್ದರು. ಈಗ ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆಗೆ ಸಿದ್ಧತೆ ನಡೆಯುತ್ತಿದೆ. ಆದರೆ, ಕಾಂಗ್ರೆಸ್ ನ ತಂತ್ರದ ಮುಂದೆ ಯಾವ ಫಲ ನೀಡುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.








