ಬೆಂಗಳೂರು: ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಹೆಣ್ಣೂರು ಠಾಣೆಯಲ್ಲಿ ಕಟ್ಟಡ ಮಾಲೀಕ ಮುನಿರಾಜು ರೆಡ್ಡಿ ಹಾಗೂ ಆತನ ಮಗನ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಮುನಿರಾಜು ರೆಡ್ಡಿ ಆತನ ಮಗ, ಕಾಂಟ್ರ್ಯಾಕ್ಟರ್ ಸೇರಿದಂತೆ ಇನ್ನಿತರರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ ಐಆರ್ ನಲ್ಲಿ ಪೊಲೀಸರು ಒಟ್ಟು ಮೂವರು ಹೆಸರನ್ನು ಉಲ್ಲೇಖಿಸಿದ್ದಾರೆ. ನಿರ್ಲಕ್ಷ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆಗೆ ಕಳಪೆ ಕಾಮಗಾರಿಯೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಕಟ್ಟಡ ನಿರ್ಮಾಣದಲ್ಲಿ ಪಿಲ್ಲರ್ ರಾಡ್ 28-30 ಎಂಎಂ ರಾಡ್ ಹಾಕಬೇಕಿತ್ತು ಆದರೆ 18-20 ಎಂಎಂ ರಾಡ್ ಬಳಸಲಾಗಿದೆ. 14-16 ರಾಡ್ ಹಾಕಿ ಮೋಲ್ಡಿಂಗ್ ಮಾಡಬೇಕಿತ್ತು. ಆದರೆ 8-10 ಎಂಎಂ ರಾಡ್ ಬಳಸಲಾಗಿದೆ. ಎಂ ಸ್ಯಾಂಡ್ ಹೆಚ್ಚು ಬಳಸಿ, ಸಿಮೆಂಟ್ ಕಡಿಮೆ ಬಳಸಿರುವ ಶಂಕೆ ಕೂಡ ವ್ಯಕ್ತವಾಗಿದೆ.
ಹೀಗಾಗಿ ಈ ಘಟನೆ ಮಳೆಯಿಂದಾಗಿ ಸಂಭವಿಸಿಲ್ಲ. ಕಳಪೆ ಕಾಮಗಾರಿಯಿಂದ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ಎಫ್ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಅವಶೇಷಗಳಡಿ ನಿಲುಕಿರುವ ಇನ್ನೂ ಕೆಲವರಿಗಾಗಿ ಹುಡುಕಾಟ ನಡೆಯುತ್ತಿದೆ.








