ರಾಮನಗರ: ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರು ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಚುನಾವಣೆಯಲ್ಲಿ ನನಗೆ ಪೂರಕವಾಗಿ ಜನ ಆಶೀರ್ವಾದ ಮಾಡಿದ್ದಾರೆ. ಹಿರಿಯ ನಾಗರಿಕರು, ಯುವಕರು ಹೆಚ್ಚು ಬೆಂಬಲ ನೀಡಿದ್ದಾರೆ. ನಿಮ್ಮ ಜೊತೆಯಲ್ಲಿ ನಾನು ಶಾಶ್ವತವಾಗಿ ಇರುತ್ತೇನೆ ಎಂದು ಹೇಳಿದ್ದಾರೆ.
ಬುಧವಾರ ಶೇ.88.80 ರಷ್ಟು ಮತದಾನ ಆಗಿದೆ. ಚನ್ನಪಟ್ಟಣ ಇತಿಹಾಸದಲ್ಲಿ ಇದು ದೊಡ್ಡ ಪ್ರಮಾಣದ ಮತದಾನವಾಗಿದೆ. ತಾಲೂಕಿನ ಜನತೆ ಒಂದು ದೊಡ್ಡ ಸಂದೇಶ ಕೊಟ್ಟಿದ್ದಾರೆ. ಹೊರಗಡೆ ನೆಲೆಸಿರುವ ಕ್ಷೇತ್ರದ ಮತದಾರರು ಬಂದು ಮತದಾನ ಮಾಡಿ ಹೋಗಿದ್ದಾರೆ. ಈ ಉಪಚುನಾವಣೆ ರಾಜ್ಯದ ಇತಿಹಾಸದ ಪುಟದಲ್ಲಿ ಉಳಿಯುತ್ತದೆ. ಈ ಉಪಚುನಾವಣೆ ನಿಖಿಲ್ ಕುಮಾರಸ್ವಾಮಿ ಉಪಚುನಾವಣೆ ಆಗಿರಲಿಲ್ಲ. ಎರಡೂ ಪಕ್ಷದ ಕಾರ್ಯಕರ್ತರ ಚುನಾವಣೆ ಆಗಿತ್ತು. ಮೊನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜಿ ಅವರು ಸ್ಪಷ್ಟ ಸಂದೇಶ ಕೊಟ್ಟಿದ್ದರು. ನಡ್ಡಾರವರು ಮಾತನಾಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.








