ತಿರುವನಂತಪುರಂ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ (Sabarimala Ayyappa Swami Temple)ದರ್ಶನ ಇಂದಿನಿಂದ (ನ.15) ಆರಂಭವಾಗಿದೆ. ಅಲ್ಲದೇ, ಡಿ. 25 ರ ವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ.
ಇಂದು ಅಯ್ಯಪ್ಪ ಸ್ವಾಮಿ ದರ್ಶನ ಸೇರಿದಂತೆ ಮಂಡಲ ಪೂಜೆ ಪ್ರಾರಂಭಗೊಳ್ಳಲಿದೆ. ದರ್ಶನ ಅವಧಿಯನ್ನು 18 ಗಂಟೆಗೆ ವಿಸ್ತರಿಸಲಾಗಿದ್ದು, ಪ್ರತಿ ನಿತ್ಯ 70 ಸಾವಿರ ಜನರಿಗೆ ದರ್ಶನಕ್ಕೆ ಅವಕಾಶ ನೀಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಜೊತೆಗೆ ಜನಸಂದಣಿ ಹೆಚ್ಚಾದಲ್ಲಿ ಸಮಯವನ್ನು ಅರ್ಧಗಂಟೆ ವಿಸ್ತರಿಸುವಂತೆ ಸೂಚಿಸಲಾಗಿದೆ.
ಸುಮಾರು 60 ಸಾವಿರ ಭಕ್ತರು ವರ್ಚುವಲ್ ಸರತಿ ವ್ಯವಸ್ಥೆಯ ಮೂಲಕ ದರ್ಶನವನ್ನು ಪಡೆಯುತ್ತಾರೆ. ಅಲ್ಲದೇ, 10 ಸಾವಿರ ಭಕ್ತರಿಗೆ ಸ್ಥಳದಲ್ಲೇ ಬುಕ್ಕಿಂಗ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಶಬರಿಮಲೆ ದೇವಸ್ಥಾನ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಮಾತನಾಡಿ, ತೀರ್ಥೋದ್ಭವದ ಆರಂಭದಿಂದ ಪ್ರತಿದಿನ ಬೆಳಗ್ಗೆ 3 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ ದರ್ಶನಕ್ಕೆ ನೀಡಲಾಗುವುದು. ಇದರಿಂದಾಗಿ ಭಕ್ತರ ನುಕುನುಗ್ಗಲನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಸ್ಥಳದಲ್ಲಿಯೇ ಬುಕ್ಕಿಂಗ್ ಮಾಡಲು ಪಂಪಾ, ಎರುಮೇಲಿ ಮತ್ತು ವಂಡಿಪೆರಿಯಾರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಲವಾರು ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. ಸ್ಪಾಟ್ ಬುಕಿಂಗ್ ಆಯ್ಕೆ ಮಾಡಿಕೊಳ್ಳುವ ಭಕ್ತರು ತಮ್ಮ ಗುರುತಿನ ಆಧಾರ್ ಕಾರ್ಡ್ ನ್ನು ತೋರಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ಕೆಎಸ್ಆರ್ಟಿಸಿ ಟಿಕೆಟ್ಗಳನ್ನು ಖರೀದಿಸಲು ವಿಶೇಷ ಅವಕಾಶವನ್ನು ನೀಡಿದೆ. ಅಲ್ಲದೇ, ಕನಿಷ್ಠ 40 ಜನರ ಗುಂಪು ಹೊಂದಿರುವವರು 10 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಆಯ್ಕೆಯನ್ನು ಕೂಡ ನೀಡಲಾಗಿದೆ.








