ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಜಯನಗರ (Jayanagara) ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ʼನನ್ನ ತೆರಿಗೆ ನನ್ನ ಹಕ್ಕುʼ ಹೆಸರಿನಲ್ಲಿ ಹೋರಾಟಕ್ಕೆ ಜಯನಗರದ ಸಂಘ ಸಂಸ್ಥೆಗಳು ಮುಂದಾಗಿವೆ.
ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಜಯನಗರ 70 ಸಂಘಟನೆಯ ಸದಸ್ಯರು ನನ್ನ ತೆರಿಗೆ ನನ್ನ ಹಕ್ಕು ಹೆಸರಿನಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಹೋರಾಟ ಭಾನುವಾರ ನಡೆಯಲಿದೆ ಎನ್ನಲಾಗಿದೆ.
ಈ ವಿಷಯವಾಗಿ ಮಾತನಾಡಿದ ಜಯನಗರ ಶಾಸಕ ರಾಮಮೂರ್ತಿ (CK Ramamurthy) ಅವರು, ಅನುದಾನ ವಿಚಾರವನ್ನು ಕೇಳಿದ್ದಕ್ಕೆ ನನ್ನ ಮುಂದೆ ತಗ್ಗಿ ಬಗ್ಗಿ ನಡೆಯಬೇಕು ಎಂದು ಹೇಳಿದ್ದಾರೆ. ನಾನು ನನ್ನ ಕ್ಷೇತ್ರದ ಜನರು, ಗುರು ಹಿರಿಯರ ಮುಂದೆ ತಗ್ಗಿ ಬಗ್ಗಿ ನಡೆಯುತ್ತೇನೆ. ಜಯನಗರ ಜನರು ತೆರಿಗೆ ಪಾವತಿಸುತ್ತಿದ್ದಾರೆ. ಈ ಕಾರಣಕ್ಕೆ ನನ್ನ ತೆರಿಗೆ ನನ್ನ ಹಕ್ಕು ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿ ರೂ.ನಂತೆ 270 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ ಈ ಪಟ್ಟಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಬೇಕಂತಲೇ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರತಿನಿಧಿಸುವ ಜಯನಗರ ಕ್ಷೇತ್ರವನ್ನು ಹೊರಗಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಿಧಾನಸಭೆಯಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಶಾಸಕ ಸಿ.ಕೆ.ರಾಮಮೂರ್ತಿ ಮಾತಾಡಿದ್ದರು ಎಂಬ ಕಾರಣಕ್ಕೆ ಜಯನಗರಕ್ಕೆ ಅನುದಾನ ನೀಡಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.








