ವಿಜಯಪುರ: ರೈತರಿಂದ ದಾಳಿಂಬೆ ಖರೀದಿಸಿ ಹಣ ನೀಡದೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.
ದಾಳಿಂಬೆ ಖರೀದಿಸಿ 6.5 ಲಕ್ಷ ರೂ. ಹಣ ನೀಡದೆ ವಂಚಿಸಿರುವ ಘಟನೆ ವಿಜಯಪುರ (Vijayapura) ತಾಲೂಕಿನ ಜಂಬಗಿ ಗ್ರಾಮದಲ್ಲಿ ನಡೆದಿದೆ. ಜಂಬಗಿ (Jambagi) ನಿವಾಸಿಗಳಾದ ಸುಭಾಸ ಹಿಟ್ನಳ್ಳಿ, ಗುರಪ್ಪಾ ಹಿಟ್ನಳ್ಳಿ ಎಂಬ ರೈತರು ದಾಳಿಂಬೆ ನೀಡಿ ವಂಚನೆಗೊಳಗಾದವರು. ನಾಲ್ವರು ಆರೋಪಿಗಳು ವಂಚಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ದಾವಣಗೆರೆ ಮೂಲದವರು ಎಂದು ಗುರುತಿಸಲಾಗಿದೆ. ಓರ್ವನನ್ನು ರಫೀಕ್ ಶೇಖ್ ಎಂದು ಈಗಾಗಲೇ ಗುರುತಿಸಲಾಗಿದೆ.
ರೈತರು ಸಾಲ ಮಾಡಿ ಕಷ್ಟಪಟ್ಟು ದಾಳಿಂಬೆ ಬೆಳೆದರೆ, ಈ ಖದೀಮರು ಖರೀದಿಸಿ ವಂಚಿಸಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಭಾಸ ಹಿಟ್ನಳ್ಳಿ, ಗುರಪ್ಪಾ ಹಿಟ್ನಳ್ಳಿ ಸಹೋದರರು ತಮ್ಮ ಮೂರು ಎಕರೆ ಜಮೀನಲ್ಲಿ ದಾಳಿಂಬೆ ಬೆಳೆದಿದ್ದರು. ಈ ದಾಳಿಂಬೆಯನ್ನು ಖರೀದಿಸಲು ರೈತರ ಸೋಗಿನಲ್ಲಿ ರಫೀಕ್ ಶೇಖ್ ಸೇರಿದಂತೆ ನಾಲ್ವರು ಬಂದಿದ್ದಾರೆ. ದಾಳಿಂಬೆಯನ್ನ ಖರೀದಿಸಿ ಅರ್ಧ ಹಣ ನೀಡಿ, ಇನ್ನುಳಿದ ಹಣ ನೀಡದೆ 6.5 ಲಕ್ಷ ರೂ. ಪಂಗನಾಮ ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
3 ಎಕರೆ ಜಮೀನಿನ ದಾಳಿಂಬೆಗೆ 12 ಲಕ್ಷ ರೂ. ಗೆ ಖದೀಮರು ಹೊಂದಿದ್ದಾರೆ. ಆನಂತರ 5.5 ಲಕ್ಷ ರೂ ಹಣ ನೀಡಿ, ಒಳ್ಳೆಯ ದಾಳಿಂಬೆಯ ಒಂದು ಲೋಡ್ ಕೊಂಡೊಯ್ದಿದ್ದಾರೆ. ಮರುದಿನ ಬಂದು ಉಳಿದ ಹಣ ನೀಡಿ ಇನ್ನುಳಿದ 2 ವಾಹನದ ಲೋಡ್ ದಾಳಿಂಬೆ ಖರೀದಿಸಲಾಗುವುದು ಎಂದು ಹೇಳಿದ್ದಾರೆ. ಆನಂತರ ಕರೆ ಮಾಡಿದರೆ, ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ರೈತರು ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








