ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ಕಾಲ ನಾವು ಸಹಿಸಿಕೊಂಡು ಇದ್ದೇವು. ಇನ್ನು ಮುಂದೆ ಸಹಿಸಲು ಆಗುವುದಿಲ್ಲ. ಇನ್ನು ಮುಂದೆ ಯತ್ನಾಳ್ ಪಕ್ಷ ಸಂಘಟನೆಗೆ ಸಹಕಾರ ನೀಡಲಿ. ಅವರೂ ಶಿಸ್ತು ಸಮಿತಿ ಎದುರು ಹಾಜರಾಗಿ ಬಂದಿದ್ದಾರೆ. ಬಾಲ್ ಹೈಕಮಾಂಡ್ ಅಂಗಳದಲ್ಲಿದೆ, ಹೈಕಮಾಂಡ್ ತೀರ್ಮಾನ ಮಾಡುತ್ತೆ. ಶಿಸ್ತು ಉಲ್ಲಂಘನೆ ಇನ್ನೂ ಮುಂದುವರೆಸಿದರೆ ಕಾರ್ಯಕರ್ತರಿಗೂ ಬೇಸರವಾಗಿದೆ. ಇಲ್ಲದಿದ್ದರೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿ ಎಂದಿದ್ದಾರೆ.
ಮಾಜಿ ಸಚಿವ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಇದಕ್ಕೆ ಅಂತ್ಯ ಹಾಡುತ್ತೇವೆ. ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಬಿಜೆಪಿಯ ಬಣ ಜಗಳದ ಬಗ್ಗೆ ಹೈಕಮಾಂಡ್ ಕೂಡ ಈಗ ಧ್ವನಿಯಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ದಾಸ್ ಅಗರ್ವಾಲ್ ಸಮ್ಮುಖದಲ್ಲಿ ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯತ್ನಾಳ್ ವಿಚಾರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ಏನಾದರೊಂದು ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.








