ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ.
ಜಾಮೀನು ನೀಡುವ ವೇಳೆ ವಿಧಿಸಲಾಗಿದ್ದ ನ್ಯಾಯಾಲಯದ ಅನುಮತಿ ಇಲ್ಲದೆ ಕರ್ನಾಟಕದ ಗಡಿ ದಾಟಬಾರದು ಎಂಬ ಷರತ್ತನ್ನು ಹೈಕೋರ್ಟ್ ಇದೀಗ ರದ್ದುಗೊಳಿಸಿದೆ.
ಈ ಹಿಂದೆ ಹೈಕೋರ್ಟ್, ಸಚಿವರು ರಾಜ್ಯದಿಂದ ಹೊರಗೆ ಪ್ರಯಾಣಿಸಬೇಕಾದರೆ ನ್ಯಾಯಾಲಯದ ಪೂರ್ವಾನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಿತ್ತು. ಈ ಷರತ್ತನ್ನು ತೆಗೆದುಹಾಕುವಂತೆ ನಾಗೇಂದ್ರ ಪರ ವಕೀಲರು ಮನವಿ ಮಾಡಿದ್ದರು.
ಇದಕ್ಕೆ ಜಾರಿ ನಿರ್ದೇಶನಾಲಯ (ED) ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಆಕ್ಷೇಪಣೆ ವ್ಯಕ್ತಪಡಿಸಿದರು. ನಾಗೇಂದ್ರ ಅವರು ಈ ಹಿಂದೆ ಕೂಡ ನ್ಯಾಯಾಲಯದ ಅನುಮತಿ ಪಡೆದು ದೆಹಲಿಗೆ ತೆರಳಿದ್ದರಿಂದ, ಮುಂದೆಯೂ ಅಗತ್ಯವಿದ್ದಾಗ ಅನುಮತಿ ಪಡೆದು ಪ್ರಯಾಣಿಸಬಹುದು. ಹೀಗಾಗಿ ಷರತ್ತು ರದ್ದುಪಡಿಸುವ ಅಗತ್ಯವಿಲ್ಲ ಎಂದು ಅವರು ವಾದಿಸಿದರು.
ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ನಾಗೇಂದ್ರ ಅವರು ಸಚಿವರಾಗಿರುವುದರಿಂದ ಅಧಿಕೃತ ಕೆಲಸಗಳಿಗಾಗಿ ರಾಜ್ಯದ ಹೊರಗೆ ಪ್ರಯಾಣಿಸುವ ಅಗತ್ಯ ಬರಬಹುದು ಎಂದು ಪರಿಗಣಿಸಿತು.
ಅಂತಿಮವಾಗಿ ರಾಜ್ಯದಿಂದ ಹೊರಗೆ ಪ್ರಯಾಣಿಸುವುದಕ್ಕೆ ವಿಧಿಸಿದ್ದ ಷರತ್ತನ್ನು ರದ್ದುಪಡಿಸಿದ ನ್ಯಾಯಾಲಯ, ಆದರೆ ನ್ಯಾಯಾಲಯದ ಅನುಮತಿ ಇಲ್ಲದೆ ದೇಶದ ಹೊರಗೆ ತೆರಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.ಇದರೊಂದಿಗೆ ಬಿ. ನಾಗೇಂದ್ರ ಅವರಿಗೆ ಜಾಮೀನು ಆದೇಶದಲ್ಲಿದ್ದ ಒಂದು ಪ್ರಮುಖ ಪ್ರಯಾಣ ನಿರ್ಬಂಧದಿಂದ ರಿಲೀಫ್ ಸಿಕ್ಕಂತಾಗಿದೆ.








