ಕೊರೋನಾ ವೈರಸ್ – ಭಾರತ ಸಾಗಿ ಬಂದ ದಾರಿ
ಮಂಗಳೂರು, ಜುಲೈ 8: ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ವಿಶ್ವದಲ್ಲಿನ ಅತಿ ಹೆಚ್ಚು ಕೊರೊನಾವೈರಸ್ ಸೋಂಕಿತರ ಪಟ್ಟಿಯಲ್ಲಿ ಕೂಡ ಮೂರನೇ ಸ್ಥಾನಕ್ಕೆ ಏರಿದೆ.
ಕೆಲವು ದಿನಗಳ ಹಿಂದೆ ರಷ್ಯಾವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದ ಭಾರತದಲ್ಲಿ ಇದೀಗ 7 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವ ಪ್ರಮಾಣವು ಏರಿಕೆ ಕಾಣುತ್ತಿರುವ ಜೊತೆಗೆ ಕೊರೊನಾದಿಂದ ಬಲಿಯಾಗುತ್ತಿರುವವರ ಸಂಖ್ಯೆಯೂ ಏರಿಕೆ ಕಂಡಿದೆ.

ಬುಧವಾರ ಮಧ್ಯಾಹ್ನದ ವೇಳೆಯ ವರೆಗಿನ ಕೊರೊನಾವೈರಸ್ ಸೋಂಕಿತರ ಅಂಕಿ-ಅಂಶವನ್ನು ನೋಡುವುದಾದರೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,44,006ಕ್ಕೆ ಏರಿಕೆಯಾಗಿದ್ದು, 22,752 ಹೊಸ ಪ್ರಕರಣಗಳು ಪತ್ತೆಯಾಗಿವೆ.
20,653 ಜನರು ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ. 4,57,058 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದರೆ, 2,66,295 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.
ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಕೊರೊನಾವೈರಸ್ ಸೋಂಕಿನಿಂದ ಅಂತಹ ಗಂಭೀರವಾದ ಸನ್ನಿವೇಶ ಉದ್ಭವಿಸಿರಲಿಲ್ಲ. ಒಂದು ರೀತಿಯಲ್ಲಿ ಎಲ್ಲವೂ ನಿಯಂತ್ರಣದಲ್ಲೇ ಇತ್ತು. ಆದರೆ ಮಾರ್ಚ್ 24 ರಂದು ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಮೆಲ್ಲಗೆ ಏರಿಕೆ ಕಾಣಲು ಪ್ರಾರಂಭಿಸಿತು. ಲಾಕ್ ಡೌನ್ ಸಡಿಲಿಕೆಯ ವಿವಿಧ ಹಂತಗಳು ಕೊನೆಗೊಂಡು ಅನ್ ಲಾಕ್ ಘೋಷಣೆಯಾಗುತ್ತಿದ್ದಂತೆ ದೇಶದಲ್ಲಿ ಕೊರೊನಾ ಮಹಾ ಸ್ಪೋಟವೇ ಉಂಟಾಗಲು ಪ್ರಾರಂಭವಾಯಿತು.

ಮೇ ತಿಂಗಳ ಮಧ್ಯದಲ್ಲಿ 1 ಲಕ್ಷದ ಆಸುಪಾಸಿನಲ್ಲಿದ್ದ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಜುಲೈ 8ರ ವೇಳೆಗೆ 7 ಲಕ್ಷದ ಗಡಿಯನ್ನೂ ದಾಟಿದೆ.
ಭಾರತದಲ್ಲಿ ಮೊದಲ ಕೊರೊನಾವೈರಸ್ ಸೋಂಕಿತ ಪ್ರಕರಣ ಪತ್ತೆಯಾದ ಬಳಿಕ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ತಲುಪಲು ಸುಮಾರು 110 ದಿನಗಳನ್ನು ತೆಗೆದುಕೊಂಡಿತ್ತು.
1 ಲಕ್ಷದಿಂದ ಸೋಂಕಿತರ ಸಂಖ್ಯೆ 2 ಲಕ್ಷದ ಸಂಖ್ಯೆಯನ್ನು ಮೀರಲು ಕೇವಲ 15 ದಿನವನ್ನು ತೆಗೆದುಕೊಂಡಿತು. ಅಂದರೆ ಮೇ 19 ರ ಅವಧಿಯಲ್ಲಿ ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 1,01,139ರಷ್ಟಿತ್ತು. ಜೂನ್ 03 ತಲುಪುವಷ್ಟರಲ್ಲಿ 2,07,615 ಮಂದಿಗೆ ಕೊರೊನಾ ಮಹಾಮಾರಿ ತಗುಲಿಕೊಂಡಿತ್ತು. ಜೂನ್ 3ರಂದು 2,07,615ರಷ್ಟಿದ್ದ ಸೋಂಕಿತರ ಸಂಖ್ಯೆಯು ಜೂನ್ 13 ತಲುಪುವಷ್ಟರಲ್ಲಿ 3,08,993ಕ್ಕೆ ಏರಿಕೆಯಾಗಿತ್ತು. ಅಂದರೆ 2 ಲಕ್ಷದಿಂದ 3 ಲಕ್ಷಕ್ಕೆ ಸೋಂಕು ಪ್ರಕರಣ ಏರಿಕೆಯಾಗಲು ತೆಗೆದುಕೊಂಡ ದಿನಗಳು ಕೇವಲ 10 !. ಬಳಿಕ ಜೂನ್.21ರ ವೇಳೆಗೆ 4,10,461ಕ್ಕೆ ಏರಿಕೆಯಾಯಿತು. 3 ಲಕ್ಷದಿಂದ 4 ಲಕ್ಷದ ಗಡಿ ದಾಟಲು ತೆಗೆದುಕೊಂಡ ಅವಧಿ ಬರೀ ಎಂಟು ದಿನ. ಅಲ್ಲಿಂದ ಸರಿಯಾಗಿ ಆರೇ ದಿನಕ್ಕೆ ( ಜೂನ್ 27) ಸೋಂಕಿತರ ಸಂಖ್ಯೆ 5,08,953ಕ್ಕೆ ಏರಿಕೆಯಾಯಿತು. ಜುಲೈ 2 ರಂದು ಅಂದರೆ ಐದೇ ದಿನಕ್ಕೆ ಆರರ ಗಡಿ ದಾಟಿ 6,04,641 ಪ್ರಕರಣ ದಾಖಲಾಯಿತು. ಜುಲೈ 6 ಕ್ಕೆ 7ಲಕ್ಷದ ಗಡಿ ದಾಟಿ 7,20 346 ಪ್ರಕರಣ ದೃಢಪಟ್ಟಿತ್ತು

ಜುಲೈ 2ರಂದು 6,04,641ರಷ್ಟಿದ್ದ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಜುಲೈ 8 ರ ವೇಳೆಗೆ 7,44,006ಕ್ಕೆ ಏರಿಕೆಯಾಗಿದೆ ಎಂದರೆ ಇದು ಸೋಂಕಿನ ಅಪಾಯದ ಕುರಿತು ಮುನ್ಸೂಚನೆಯನ್ನು ನೀಡುತ್ತಿದೆ. ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ವಿಶ್ವದ ಕೊರೊನಾ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನದಲ್ಲಿರುವ ದೊಡ್ಡಣ್ಣ ಅಮೆರಿಕವನ್ನು ಹಿಂದಿಕ್ಕುವುದರಲ್ಲಿ ಸಂಶಯವಿಲ್ಲ.








