ಶಕ್ತಿ ಯೋಜನೆಯಿಂದಾಗಿ ರಾಜ್ಯ ಸರ್ಕಾರ ಅಪಾರ ನಷ್ಟ ಎದುರಿಸುತ್ತಿದ್ದು, ಸಾರಿಗೆ ನೌಕರರು ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಯೋಜನೆಯಿಂದ ರಾಜ್ಯದ ಆರ್ಥಿಕ ಸ್ಥಿತಿ ದುರ್ಬಲಗೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವರಾಜ ರಾಯರೆಡ್ಡಿ ಅವರು ಹಲವು ಬಾರಿ ಹೇಳಿದರೂ ಸಿಎಂ ಸಿದ್ದರಾಮಯ್ಯ ಕೇಳಿಲ್ಲ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ರಾಜ್ಯ ಸರ್ಕಾರ 4,000 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ಸಾರಿಗೆ ನೌಕರರು ಧರಣಿ ನಡೆಸುತ್ತಿದ್ದು, ಅವರಿಗೆ ವೇತನ-ಬಾದ್ಯತೆ ನಿರ್ವಹಿಸಲು 4 ಸಾವಿರ ಕೋಟಿ ರೂ. ನೀಡಬೇಕು. ಜೊತೆಗೆ ರೈತರಿಗೆ 1,500 ಕೋಟಿ ರೂ. ಸಬ್ಸಿಡಿ ನಾಮ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಾಮ ಹಾಕುವುದರಲ್ಲಿ ಕಾಂಗ್ರೆಸ್ಸಿಗರು ಪಳಗಿದವರು
ಈಗಿನ ಸರ್ಕಾರ ಈ ವರ್ಷ 1.5 ಲಕ್ಷ ಕೋಟಿ ಸಾಲ ಮಾಡಿದ್ದು, ಮುಂದಿನ ವರ್ಷ 2 ಲಕ್ಷ ಕೋಟಿ ಸಾಲ ಮಾಡಿದರೆ, ಕರ್ನಾಟಕ ಜನ್ಮದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಇದು ನಮ್ಮ ರಾಜ್ಯದ ಜನರ ಜೀವನವನ್ನು ಪತನಕ್ಕೊಳಪಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಸ್ತೆಯ ಹೆಸರು ವಿವಾದ:
ಕರ್ನಾಟಕದ ಪ್ರಗತಿಗೆ ಮಹತ್ವಪೂರ್ಣವಾದ ಕೃಷ್ಣರಾಜಸಾಗರ ಅಣೆಕಟ್ಟನ್ನು ನೀಡಿದ ಮನೆತನದ ಹೆಸರನ್ನು ಕೆ.ಆರ್. ರಸ್ತೆಯಿಂದ ತೆಗೆದು ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಇಡುವುದು ಸರಿಯಾದ ಬೆಳವಣಿಗೆ ಅಲ್ಲ. ಹಾಗೇನಾದರೂ ಹೆಸರು ಇಡಬೇಕು ಎಂದಿದ್ದರೆ, ಹೊಸ ರಸ್ತೆಯನ್ನು ನಿರ್ಮಿಸಿ, ಅವರ ಹೆಸರನ್ನು ಇಡಲಿ. ಮಹಾರಾಜರ ಮನೆತನ ಈ ನಾಡಿಗೆ ಅನ್ನ-ನೀರು ಕೊಟ್ಟಿದೆ. ಅದಕ್ಕೆ ವಿರುದ್ಧವಾಗಿ ಮಾಡುವ ಕೆಲಸ ಜನರ ಭಾವನೆಗೆ ಹೊಡೆತ ನೀಡುತ್ತದೆ. ಮಾರಿ ಕಣ್ಣು ಹೋರಿ ಮೇಲೆ ಎನ್ನುವಂತೆ ಆ ಕುಟುಂಬವನ್ನು ಗುರಿ ಮಾಡಬಾರದು. ಸಿಎಂ ಸಿಎಂ ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಅವರು ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆಂದರೆ ಜನರಿಗೆ ಅವರ ಬಗ್ಗೆ ಇರುವ ಭರವಸೆ ಕಳೆದುಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ. ರವಿ ಪ್ರಕರಣ:
ಸಿ.ಟಿ. ರವಿ ಮೇಲೆ 40-50 ಜನ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿದ್ದಾರೆ. ಈ ಪ್ರಕರಣದಲ್ಲಿ ಸಚಿವರು ಮತ್ತು ಅವರ ಪಿಎ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಎಫ್ಐಆರ್ ದಾಖಲಿಸಲು ನಾವು ಬಲವಂತ ಮಾಡಬೇಕಾಯಿತು. ಈ ಸರ್ಕಾರಕ್ಕೆ ಬುದ್ಧಿ ಭ್ರಮಣೆಯಾಗಿದೆ. ಪೊಲೀಸ್ ಠಾಣೆಗಳು ಈಗ ಸುರಕ್ಷಿತವಾಗಿಲ್ಲ. ಗೃಹ ಸಚಿವರ ಜವಾಬ್ದಾರಿ ಕಳೆದುಹೋಗಿದೆ, ಎಂದು ಅವರು ಕಿಡಿಕಾರಿದರು.
ಹುತಾತ್ಮ ಯೋಧರ ಆತ್ಮಗಳಿಗೆ ಶಾಂತಿ ದೊರಕಲಿ:
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಮೂವರು ಕರ್ನಾಟಕದ ಯೋಧರು ಸೇರಿ ಐವರು ಹುತಾತ್ಮರಾಗಿದ್ದಾರೆ ಎಂಬ ಸುದ್ದಿ ಕೇಳಿ ದುಃಖವಾಯಿತು. ಬೆಳಗಾವಿಯ ಸುಬೇದಾರ್ ದಯಾನಂದ ತಿರಕಣ್ಣವರ (45), ಕುಂದಾಪುರದ ಅನೂಪ್ (33), ಮಹಾಲಿಂಗಪುರದ ಮಹೇಶ್ ಮರಿಗೊಂಡ (25) – ಈ ಮೂವರು ಕರ್ನಾಟಕದ ಯೋಧರು. ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.