ಅನೇಕಲ್: ಪೊಲಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟಿರುವ ಘಟನೆ ನಡೆದಿದೆ.
ಆರೋಪಿಯ ಬಂಧನಕ್ಕೆ ತೆರಳಿದ್ದ ಸಂದರ್ಭದಲ್ಲಿ ಆತ ಪೊಲೀಸರ (Police) ಮೇಲೆ ಹಲ್ಲೆಗೆ ಯತ್ನಿಸಿದ್ದ. ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ ಘಟನೆ ಬಂಡಾಪುರ ಸಮೀಪದ ಮಡಿವಾಳದಲ್ಲಿ ನೆಡೆದಿದೆ.
ರೌಡಿಶೀಟರ್ ಸುನೀಲ್ ಅಲಿಯಾಸ್ ಹಾವೇರಿ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈತನ ಬಂಧನಕ್ಕೆ ತೆರಳಿದ್ದ ಸಂದರ್ಭದಲ್ಲಿ ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆಗ ಅತ್ತಿಬೆಲೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಘವ್ ಗೌಡ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ನವೆಂಬರ್‌ನಲ್ಲಿ ಜಿಗಣಿ ಬಳಿ ರೌಡಿಶೀಟರ್ ಮನೋಜ್ ಗ್ಯಾಂಗ್ ಮೇಲೆ ಅಟ್ಯಾಕ್ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಗಣಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆಯ ನಂತರ ಸುನೀಲ್ ತಲೆಮರೆಸಿಕೊಂಡಿದ್ದ. ಅಲ್ಲದೇ, ಆರೋಪಿ ವಿರುದ್ಧ ಮರಸೂರು ಗೇಟ್ ಪೆಟ್ರೋಲ್ ಬಂಕ್ ಗಲಾಟೆ, ಒಂದು ಕೊಲೆ ಎರಡು ಕೊಲೆ ಯತ್ನ ಸೇರಿದಂತೆ ಒಟ್ಟು 7 ಪ್ರಕರಣಗಳು ಕೂಡ ಇವೆ.
ಹೀಗಾಗಿ ಈತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಆತನ ವಿರುದ್ಧ ಅರೆಸ್ಟ್ ವಾರೆಂಟ್ ಕೂಡ ಇತ್ತು. ರೌಡಿಶೀಟರ್ ನಡೆಸಿದ ಹಲ್ಲೆಯಿಂದ ವಿನಯ್ ಎಂಬ ಕಾನ್‌ಸ್ಟೇಬಲ್ ಕೈಗೆ ಗಾಯವಾಗಿದೆ.








