ಮನಮೋಹನ್ ಸಿಂಗ್ (Manmohan Singh) ಜನಪ್ರಿಯ ನಾಯಕನಾಗಿಲ್ಲದಿದ್ದರೂ ಅವರಿಗೆ ಪ್ರಧಾನಿ ಪಟ್ಟ ಒಲಿದು ಬಂದಿತ್ತು.
2004ರಲ್ಲಿ ಪ್ರಧಾನಿ ಪಟ್ಟ ಸಿಕ್ಕಿದ್ದೇ ರೋಚಕ ಎನ್ನುವಂತಾಗಿದೆ. ಅಟಲ್ ಬಿಹಾರಿ (Atal Bihari Vajpayee) ಸರ್ಕಾರ 1999 ರಿಂದ ಕೇಂದ್ರದಲ್ಲಿ ಆಡಳಿತ ನಡೆಸಿತ್ತು. ಮೂಲಸೌಕರ್ಯ ಸೇರಿದಂತೆ ಹಲವಾರು ಯೋಜನೆಗಳಿಂದಾಗಿ ಮತ್ತೆ ಆಯ್ಕೆ ಆಗುತ್ತೇವೆ ಎಂಬ ವಿಶ್ವಾಸದಿಂದ 6 ತಿಂಗಳು ಮೊದಲೇ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗಿತ್ತು. ʼಭಾರತ ಪ್ರಕಾಶಿಸುತ್ತದೆʼ ಅಡಿ ಎನ್ಡಿಎ ನಾಯಕರು ಭರ್ಜರಿ ಪ್ರಚಾರ ನಡೆಸಿದರು. ಆದರೆ 2004ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ (Sonia Gandhi) ನೇತೃತ್ವದ ಯುಪಿಎ (UPA) ಭರ್ಜರಿ ಗೆಲುವು ಸಾಧಿಸಿತ್ತು.
ಅಧಿಕಾರಕ್ಕೆ ಯುಪಿಎ ಏರುವುದು ನಿಶ್ಚಿತವಾಗುತ್ತಿದ್ದಂತೆ ಸೋನಿಯಾ ಗಾಂಧಿ ಪ್ರಧಾನಿ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ವಿದೇಶಿ ಮಹಿಳೆ ಭಾರತದ ಪ್ರಧಾನಿ ಹುದ್ದೆ ಅಲಂಕರಿಸುವುದು ಸರಿಯಲ್ಲ ಎಂದು ವಿಪಕ್ಷಗಳು ಟೀಕಿಸಲು ಆರಂಭಿಸುತ್ತಿದ್ದಂತೆ ಸೋನಿಯಾ ಗಾಂಧಿ ತಮಗೆ ಸಿಕ್ಕಿದ್ದ ಅವಕಾಶವನ್ನು ಮನಮೋಹನ್ ಸಿಂಗ್ ಅವರಿಗೆ ನೀಡಿದರು.
ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯಿಂದ ಹಿಂದೆ ಸರಿಯುತ್ತಿದ್ದಂತೆ ಸಾಕಷ್ಟು ಹೆಸರುಗಳು ಈ ರೇಸ್ ನಲ್ಲಿ ಕೇಳಿ ಬಂದಿದ್ದವು. ಮಾಧ್ಯಮಗಳಲ್ಲಿ ಕೆಲವರ ಹೆಸರುಗಳು ಹರಿದಾಡಲು ಆರಂಭವಾದವು. ಆದರೆ, ಯಾರೂ ನಿರೀಕ್ಷೆ ಮಾಡದ ಹೆಸರನ್ನು ಸೋನಿಯಾ ಗಾಂಧಿ ಫೈನಲ್ ಮಾಡಿದರು. ಆ ಹೆಸರೇ ಮನಮೋಹನ್ ಸಿಂಗ್. ಅಂದು ಸೋನಿಯಾ ಮನಮೋಹನ್ ಸಿಂಗ್ ಅವರ ಕೈಗೆ ದೇಶವನ್ನು ನೀಡಿದರು.
ಮನಮೋಹನ ಸಿಂಗ್ ಆರ್ಥಿಕ ತಜ್ಞ ಹೌದು. ಆದರೆ ಜನಪ್ರಿಯ ನಾಯಕನಲ್ಲ. ಮಿತ ಭಾಷಿ. ಹೀಗಿದ್ದರೂ ಪಿವಿ ನರಸಿಂಹ ರಾವ್ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಯನ್ನು ಗಮನಿಸಿ ಮನಮೋಹನ ಸಿಂಗ್ ರಿಗೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ನೀಡಿದ್ದರು.
ಚುನಾವಣೆಯಲ್ಲಿ ಕಾಂಗ್ರೆಸ್ (Congress) ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಏಕಾಂಗಿಯಾಗಿ ಸರ್ಕಾರ ನಡೆಸುವಷ್ಟು ಬಹುಮತ ಸಿಕ್ಕಿರಲಿಲ್ಲ. ಕಾಂಗ್ರೆಸ್ನಲ್ಲಿ ಯಾರೇ ಪ್ರಧಾನಿಯಾದರೂ ಮಿತ್ರ ಪಕ್ಷಗಳನ್ನು ಸಂಭಾಳಿಸುವುದು ಕಷ್ಟ ಎನ್ನುವುದು ಸೋನಿಯಾಗೆ ತಿಳಿದಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾದರೆ ಮಿತ್ರ ಪಕ್ಷಗಳು ವಿರೋಧ ಮಾಡುವುದಿಲ್ಲ ಎನ್ನುವುದನ್ನು ತಿಳಿದಿದ್ದ ಸೋನಿಯಾ ಗಾಂಧಿ, ಸಿಂಗ್ ರಿಗೆ ಪ್ರಧಾನಿ ಹುದ್ದೆ ನೀಡಿದ್ದರು ಎನ್ನಲಾಗುತ್ತಿತ್ತು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ ಅವರ ಸರ್ಕಾರಕ್ಕೆ ಸಲಹೆ ನೀಡಲು ರಾಷ್ಟ್ರೀಯ ಸಲಹಾ ಮಂಡಳಿ(National Advisory Council) ರಚನೆಯಾಗಿತ್ತು. ಈ ಮಂಡಳಿಗೆ ಸೋನಿಯಾ ಗಾಂಧಿ ಮುಖ್ಯಸ್ಥರಾಗಿದ್ದರು. ಈ ಮಂಡಳಿ ರಚನೆಯಿಂದ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ ಸೋನಿಯಾ ಗಾಂಧಿ ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿದ್ದವು.








