ಬೆಂಗಳೂರು: ಇದ್ದು ಇಲ್ಲದಂತೆ ಹಲ್ಲು ಕಿತ್ತ ಹಾವಂತಾಗಿರುವ ರಾಜ್ಯ ಲೋಕಾಯುಕ್ತಕ್ಕೆ ಮರು ಜೀವ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಸಂಬಂಧ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷೆತಯಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರಾಥಮಿಕ ವಿಚಾರಣೆಯನ್ನು 90 ದಿನದಲ್ಲಿ ಮುಗಿಸಬೇಕು. ಆರು ತಿಂಗಳ ಒಳಗೆ ಚಾರ್ಜ್‍ಶೀಟ್ ಸಲ್ಲಿಸಬೇಕು. ಎರಡನ್ನು ಕಡ್ಡಾಯಗೊಳಿಸಿ ಲೋಕಾಯುಕ್ತ ಕಾಯ್ದೆ ಸೆಕ್ಷನ್ 9ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.
ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಯಡಿಯೂರಪ್ಪ ಅವರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಲೋಕಾಯುಕ್ತಕ್ಕೆ ಮರು ಜೀವ ನೀಡುತ್ತೇವೆ. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಯನ್ನು ರದ್ದು ಮಾಡುತ್ತೇವೆ ಎಂದಿದ್ದರು.
ಈ ನಡುವೆ, ಕೆಪಿಎಸ್‍ಸಿ ಸದಸ್ಯ ಲಕ್ಷ್ಮಿ ನರಸಯ್ಯ ಅವರು ಜುಲೈ 13 ರಂದು ನಿವೃತ್ತಿಯಾಗಲಿದ್ದು, ಆ ಹುದ್ದೆ ತುಂಬಲು ಸಂಪುಟ ಸಭೆಯಲ್ಲಿ ಸಿಎಂಗೆ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಎಪಿಎಂಸಿಗಳಲ್ಲಿ 1.5 ಸೆಸ್ ಕಲೆಕ್ಟ್ ಮಾಡುತ್ತಿದ್ದೇವೆ. ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಶೇ.1ರಷ್ಟು ಸೆಸ್ ಇಳಿಕೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ರಾಯಚೂರಿನಲ್ಲಿ ಐಐಟಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ನಾಲ್ಕು ವರ್ಷಗಳಲ್ಲಿ 44 ಕೋಟಿ ರೂ. ಒದಗಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.








