ಬೆಳಗಾವಿ: ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಬೃಹತ್ ಪ್ರತಿಮೆ (Gandhi Statue) ಸ್ಥಾಪಿಸಲಾಯಿತು.
ಮಂಗಳವಾರ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚರಕ ತಿರುಗಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಗದಗ ಗ್ರಾಮೀಣ ವಿವಿಗೆ ʻಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿʼ ಎಂದು ಮರು ನಾಮಕರಣ ಮಾಡಲಾಯಿತು. ʻಗಾಂಧಿ ಭಾರತʼ (Gandhi Bharat) ವಿಶೇಷ ಸ್ಟಾಂಪ್ ಕೂಡ ಬಿಡುಗಡೆಯಾಯಿತು.
ಲೋಕಸಭೆ ಸದಸ್ಯೆ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಲವಾರು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪ್ರತಿಮೆ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಗಾಂಧೀಜಿ ಹೇಳಿದಂತೆ ರಾಮರಾಜ್ಯ ಹಾಗೂ ಗ್ರಾಮ ರಾಜ್ಯ ಆಗಬೇಕಾದರೆ, ಪ್ರತಿ ಮನೆಯಲ್ಲಿ ತಂದೆಯ ಮಾತಿಗೆ ಕಟ್ಟು ಬಿದ್ದು ಎಲ್ಲಾ ಸೌಕರ್ಯ ಬಿಟ್ಟು ಕಾಡಿಗೆ ಹೊರಟ ಶ್ರೀ ರಾಮನಂತ ಮಗ ಇರಬೇಕು. ಅಣ್ಣನ ಜೊತೆ ಕಾಡಿಗೆ ಹೊರಟ ಲಕ್ಷ್ಮಣ ನಂತ ಸಹೋದರ ಇರಬೇಕು. ಕಷ್ಟವಾದರೂ ನನ್ನ ಪತಿಯ ಜೊತೆ ಹೋಗುತ್ತೇನೆ ಎಂದು ಹೊರಟ ಸೀತಾ ಮಾತೆಯಂತ ಮಡದಿ ಇರಬೇಕು. ಆಗ ದೇಶ ʻಗ್ರಾಮ ರಾಜ್ಯ – ರಾಮ ರಾಜ್ಯʼ ಎರಡೂ ಆಗಲಿದೆ ಎಂದಿದ್ದಾರೆ.








