ಬೆಂಗಳೂರು : ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗುತ್ತಾರಾ ಮೊಹಮ್ಮದ್ ನಲಪಾಡ್..? ಸದ್ಯ ಕೆಪಿಸಿಸಿ ಕಚೇರಿ ಆವರಣದಲ್ಲಿ ಸದ್ದು ಮಾಡುತ್ತಿರುವ ಪ್ರಶ್ನೆ ಇದು. ಇನ್ನೇನು ಕೆಲವೇ ದಿನಗಳಲ್ಲಿ ಬಸನಗೌಡ ಬಾದರ್ಲಿ ಅವರ ಅವಧಿ ಮುಕ್ತಾಯವಾಗಲಿದೆ. ಇದರೊಂದಿಗೆ ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನ ಖಾಲಿಯಾಗಲಿದ್ದು, ರಾಜ್ಯ ಕೈ ಪಾಳಯದಲ್ಲಿ ರಾಜಕಾರಣಿಗಳ ಮಕ್ಕಳ ಲಾಬಿ ಜೋರಾಗಿದೆ.
ಅದರಲ್ಲೂ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಯುವ ಘಟಕದ ಅಧ್ಯಕ್ಷರಾಗಲು ಭಾರಿ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ನಲಪಾಡ್ ಕಾಂಗ್ರೆಸ್ ಪರ ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪರ ಭಾರಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಮೊನ್ನೆಯಷ್ಟೆ ಡಿ.ಕೆ ಶಿವಕುಮಾರ್ ಪರವಾಗಿ ದಿ ಬೆಸ್ಟ್ ಟಿಕ್ ಟಾಕ್ ವಿಡಿಯೋ ಮಾಡಿದರೇ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ನಲಪಾಡ್ ಹೇಳಿದ್ದರು. ಇದು ಭಾರಿ ಟೀಕೆ, ಚರ್ಚೆಗೂ ಗ್ರಾಸವಾಗಿತ್ತು.
ಹಾಗಾದ್ರೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಲು ಲಾಬಿ ನಡೆಸುತ್ತಿರುವ ನಲಪಾಡ್ ರ ಪ್ಲಸ್- ಮೈನಸ್ ಪಾಯಿಂಟ್ ಗಳೇನು..? ಎಂಬೋದನ್ನ ನೋಡೋದಾದ್ರೆ..
ನಲಪಾಡ್ ಗೆ ಪಕ್ಷ ಸಂಘಟನೆಯಲ್ಲಿ ಉತ್ಸಾಹವಿದೆ. ಜನರನ್ನು ಒಟ್ಟುಗೂಡಿಸುವ ಚಾಕಚಕ್ಯತೆ ಜೊತೆಗೆ ಆರ್ಥಿಕವಾಗಿ ಸದೃಢವಾಗಿರುವುದು ನಲಪಾಡ್ ರ ಆನೆ ಬಲ. ಇದರೊಂದಿಗೆ ಮೊಹಮ್ಮದ್ ಗೆ ತಂದೆ ಹ್ಯಾರೀಸ್ ನಲಪಾಡ್ ರ ರಾಜಕೀಯ ಅನುಭವ, ಪಕ್ಷದಲ್ಲಿರುವ ಕೆಲ ನಾಯಕರ ಬೆಂಬಲ ಪ್ಲಸ್ ಪಾಯಿಂಟ್ ಗಳಾಗಿವೆ. ಆದ್ರೆ ವಿದ್ವತ್ ಮೇಲಿನ ಹಲ್ಲೆ ಪ್ರಕರಣ ನಲಪಾಡ್ ಗೆ ಹಿನ್ನಡೆಯನ್ನುಂಟು ಮಾಡಬಹುದು. ಇದು ನಲಪಾಡ್ ರ ಮೈನಸ್ ಪಾಯಿಂಟ್ ಆಗಿದೆ.

ಇನ್ನುಳಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕಾಗಿ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಪುತ್ರ ಸೌಮ್ಯ ರೆಡ್ಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಆಪ್ತ ಮಂಜುನಾಥ್ ಕೂಡ ಪೈಪೋಟಿ ನಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.








