ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ (KOA) ಅಧ್ಯಕ್ಷ ಗೋವಿಂದರಾಜು ಅವರ ಸರ್ವಾಧಿಕಾರಿ ಧೋರಣೆ ಮತ್ತು ರಾಜ್ಯ ಕ್ರೀಡಾ ನೀತಿ ಕುರಿತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ಖೋ-ಖೋ ಸಂಸ್ಥೆ (ರಿ.) ಫೆಬ್ರವರಿ 18 ರಂದು ಬೆಂಗಳೂರು ಸ್ವಾತಂತ್ರ್ಯ ಉದ್ಯಾನ (ಫ್ರೀಡಂ ಪಾರ್ಕ್)ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
KOA ಅಧ್ಯಕ್ಷ ಗೋವಿಂದರಾಜು ವಿರುದ್ಧ ಆರೋಪಗಳು:
ಭಾರತೀಯ ಒಲಂಪಿಕ್ ಅಸೋಸಿಯೇಷನ್ ನಿಯಮದಂತೆ, ಒಬ್ಬ ವ್ಯಕ್ತಿ ಮೂರು ಅವಧಿ ಅಧ್ಯಕ್ಷರಾಗಲು ಅವಕಾಶವಿದೆ, ನಂತರ ಒಂದು ಅವಧಿ ವಿರಾಮ ತೆಗೆದುಕೊಳ್ಳಬೇಕು. ಆದರೆ, ಗೋವಿಂದರಾಜು 24 ವರ್ಷಗಳಿಂದ ನಿರಂತರವಾಗಿ ಅಧಿಕಾರದಲ್ಲಿದ್ದು, ತನ್ನ ರಾಜಕೀಯ ಪ್ರಭಾವ ಬಳಸಿ ನಿಯಮ ಬದಲಾವಣೆ ಮಾಡಿದ್ದಾರೆ.
ಕಾರ್ಯದರ್ಶಿ ಆನಂತರಾಜು 22 ವರ್ಷಗಳಿಂದ ಅಧಿಕಾರದಲ್ಲಿದ್ದು, ಇವರು ಎರಡು ಅವಧಿಯ ನಂತರ ಮಧ್ಯಂತರ ವಿರಾಮ ಪಡೆಯಬೇಕಿತ್ತು.
ಕ್ರೀಡಾ ಆಡಳಿತದಲ್ಲಿ ರಾಜಕೀಯ ಪ್ರಭಾವವಿಲ್ಲದವರೇ ಇರಬೇಕು ಎಂಬ ನಿಯಮವಿದ್ದರೂ, ಗೋವಿಂದರಾಜು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದರೂ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಸರ್ಕಾರದಿಂದ ಅನುದಾನ ಪಡೆಯಲು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಆದರೆ, ಅಧಿಕೃತ ಕ್ರೀಡಾ ಸಂಸ್ಥೆಗಳಿಗೆ ಅನುದಾನ ತಲುಪದಂತೆ ಮಾಡಲಾಗುತ್ತಿದೆ.
ಕರ್ನಾಟಕ ಖೋ-ಖೋ ಸಂಸ್ಥೆಯ ಮುಖ್ಯ ಬೇಡಿಕೆಗಳು:
1. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳಿಗೆ ಗ್ರೇಡ್ A & B ಸರ್ಕಾರಿ ಹುದ್ದೆ ಹಾಗೂ ಕನಿಷ್ಠ ₹80 ಲಕ್ಷ ಬಹುಮಾನ ನೀಡಬೇಕು.
2. ಆಧಿಕೃತ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ನೇರವಾಗಿ ಅನುದಾನ ನೀಡುವ ವ್ಯವಸ್ಥೆ ಪುನಃ ಜಾರಿಗೆ ತರಬೇಕು. ಪ್ರಸ್ತುತ ಒಲಂಪಿಕ್ ಅಸೋಸಿಯೇಷನ್ ಮೂಲಕ ಅನುದಾನ ನೀಡುವ ವ್ಯವಸ್ಥೆಯನ್ನು ರದ್ದುಗೊಳಿಸಬೇಕು.
3. ಅಧಿಕೃತ ರಾಷ್ಟ್ರ ಮಟ್ಟದ ನೋಂದಾಯಿತ ರಾಜ್ಯ ಕ್ರೀಡಾ ಸಂಸ್ಥೆಗಳನ್ನು ಕಡ್ಡಾಯವಾಗಿ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕು.
4. ಒಲಂಪಿಕ್ ಅಸೋಸಿಯೇಷನ್ನಲ್ಲಿರುವ ಅಕ್ರಮ ಬದಲಾವಣೆಗಳನ್ನು ಸರಿಪಡಿಸಬೇಕು ಮತ್ತು ಅನುದಾನ ದುರುಪಯೋಗದ ಬಗ್ಗೆ ತನಿಖೆ ನಡೆಸಬೇಕು.
5. ರಾಜ್ಯದ ಎಲ್ಲಾ ಕ್ರೀಡಾ ಸಂಸ್ಥೆಗಳ ಸಮಸ್ಯೆಗಳನ್ನು ಆಲಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಪ್ರತಿಭಟನೆಯ ವಿವರ
ಈ ಫೆಬ್ರವರಿ 18, 2025, ಮಂಗಳವಾರ ಬೆಳಿಗ್ಗೆ 10:00 ಗಂಟೆಗೆ ಸ್ವಾತಂತ್ರ್ಯ ಉದ್ಯಾನ (ಫ್ರೀಡಂ ಪಾರ್ಕ್), ಬೆಂಗಳೂರು ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಕರ್ನಾಟಕ ಖೋ-ಖೋ ಸಂಸ್ಥೆಯ ಅಧ್ಯಕ್ಷ ಶ್ರೀ ಲೋಕೇಶ್ವರ ಅವರು ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು, ಮಾಧ್ಯಮಗಳು ವಿಶೇಷ ಗಮನಹರಿಸಲು ಕೋರಿದ್ದಾರೆ.
ಈ ಪ್ರತಿಭಟನೆಯಲ್ಲಿ ನೂರಾರು ಕ್ರೀಡಾಪಟುಗಳು, ಕೋಚ್ಗಳು ಮತ್ತು ಕ್ರೀಡಾ ಸಂಘಗಳ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ರಾಜ್ಯ ಕ್ರೀಡಾ ನೀತಿ ಸುಧಾರಣೆಗಾಗಿ ಒತ್ತಾಯಿಸಲಿದ್ದಾರೆ.








