ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರು ಮತ್ತೆ ತಮ್ಮ ಹೇಳಿಕೆ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸರಾಗಿದ್ದಾರೆ. ಈ ಬಾರಿ ಅವರು ವಾಗ್ದಾಳಿ ನಡೆಸಿರೋದು ಕಾಂಗ್ರೆಸ್ಸಿನ ನಾಯಕರ ಮೇಲೆ. ಕಾಂಗ್ರೆಸ್ ಪಕ್ಷದಲ್ಲಿ ಮೂರು ರೀತಿಯ ಹುಚ್ಚರಿದ್ದಾರೆ ಎಂದು ವ್ಯಂಗ್ಯವಾಡಿದ ಈಶ್ವರಪ್ಪ, ಅರೆ ಹುಚ್ಚರು, ಪೂರ್ಣ ಹುಚ್ಚರು ಮತ್ತು ಹುಚ್ಚು ಬಿಟ್ಟವರು ಎಂದು ಹೇಳಿದ್ದಾರೆ.
ಒಂದು ಕಡೆ ಆಪರೇಶನ್ ಸಿಂಧೂರ ಕುರಿತು ಕಾಂಗ್ರೆಸ್ ನಾಯಕರು ಅರ್ಥವಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಯಾರಿಗೆ ಬೇಕಾದರೂ ಏನಾದರೂ ಹೇಳಬಹುದೆಂಬ ಸ್ಥಿತಿಗೆ ಅವರು ಬಂದು ಬಿಟ್ಟಿದ್ದಾರೆ. ಪಕ್ಷದಲ್ಲಿ ಶಿಸ್ತೂ ಇಲ್ಲ, ಧೋರಣೆಯ ಸ್ಪಷ್ಟತೆಯೂ ಇಲ್ಲ. ಒಂದು ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರು, ಪಾಕಿಸ್ತಾನದ ವಿರುದ್ಧ ಯುದ್ಧವಾಯಿತು ಎಂದರೆ ನಾವು ದೇಶದ ಜೊತೆ ಇರುತ್ತೇವೆ ಅಂತ. ಆದ್ರೆ ಈಗ ಅವರ ಮಾತು ಬದಲಾಗಿದೆ. ಇದು ಅವರು ಮುಸ್ಲಿಮರನ್ನು ಓಲೈಸಲು ಮಾಡುತ್ತಿರುವ ರಾಜಕೀಯದ ಭಾಗ, ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ದೇಶದ ಹಿತವನ್ನು ಬಲಿ ಹಾಕಿ, ಮತಬ್ಯಾಂಕ್ ರಾಜಕೀಯವನ್ನೇ ಮುಂದುವರೆಸುತ್ತಿದೆ. ಮುಸ್ಲಿಂ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಯಾವ ಪ್ರಮಾಣದ ರಾಜಕೀಯ ನಡೆಬೇಕು ಎಂಬುದರ ನೋಟವನ್ನು ನಾವು ಈಗ ಕಾಣುತ್ತಿದ್ದೇವೆ. ಇದು ರಾಷ್ಟ್ರ ದ್ರೋಹಕ್ಕಿಂತ ಕಡಿಮೆ ಅಲ್ಲ ಎಂದು ಅವರು ಹೇಳಿದರು.
ಈಶ್ವರಪ್ಪ ಅವರ ಈ ಮಾತುಗಳು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಇದಕ್ಕೆ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.








