ಮೈಸೂರು: ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಸಂಚಲನವೊಂದು ಶುರುವಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮೈಸೂರಿನ ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಬೇಕು ಎಂಬ ಬಲವಾದ ಒತ್ತಾಯ ಕೇಳಿಬಂದಿದೆ. ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಸಾ ರಾ ಮಹೇಶ್ ಈ ಕುರಿತು ಪ್ರಬಲ ಪ್ರಸ್ತಾಪ ಮುಂದಿಟ್ಟಿದ್ದಾರೆ.
ಶನಿವಾರ ನಗರದ ದೇವೇಗೌಡ ವೃತ್ತದ ಬಳಿಯ ಎಂ ಪ್ರೋ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸಾ ರಾ ಮಹೇಶ್ ಈ ಹೇಳಿಕೆ ನೀಡಿದರು. ಜಿಲ್ಲಾ ಪಂಚಾಯಿತಿ ಮತ್ತು ನಗರಪಾಲಿಕೆಯ ಮಾಜಿ ಸದಸ್ಯರಾದ ಮಾದೇಗೌಡ ಅವರನ್ನು ಜೆಡಿಎಸ್ ಪಕ್ಷಕ್ಕೆ ಮರಳಿ ಬರಮಾಡಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಲು ಕುಮಾರಸ್ವಾಮಿ ಅವರ ನಾಯಕತ್ವದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಶಕ್ತಿ ಹೆಚ್ಚಿಸಲು ಮಾಸ್ಟರ್ ಪ್ಲಾನ್
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕೆಂಬುದು ನಮ್ಮ ಗುರಿಯಾಗಿದೆ. ಈ ಗುರಿ ತಲುಪಲು ಕುಮಾರಸ್ವಾಮಿ ಅವರು ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರವನ್ನು ಆಯ್ದುಕೊಳ್ಳಬೇಕು. ಅವರು ಇಲ್ಲಿಂದ ಸ್ಪರ್ಧಿಸಿದರೆ ಇಡೀ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಸಂಚಲನ ಸೃಷ್ಟಿಯಾಗುತ್ತದೆ. ಇದರಿಂದ ಪಕ್ಷಕ್ಕೆ ಆನೆಬಲ ಬರುವುದಲ್ಲದೆ, ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ ಎಂದು ಸಾ ರಾ ಮಹೇಶ್ ವಿಶ್ಲೇಷಿಸಿದರು.
ಅಂತಿಮ ತೀರ್ಮಾನ ಕುಮಾರಣ್ಣನಿಗೆ ಬಿಟ್ಟಿದ್ದು
ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದು ನಮ್ಮೆಲ್ಲಾ ಮುಖಂಡರ ಮತ್ತು ಕಾರ್ಯಕರ್ತರ ಒಮ್ಮತದ ಆಶಯವಾಗಿದೆ. ಇದು ಕೇವಲ ನನ್ನ ವೈಯಕ್ತಿಕ ಬೇಡಿಕೆಯಲ್ಲ, ಬದಲಾಗಿ ಪಕ್ಷದ ಹಿತದೃಷ್ಟಿಯಿಂದ ಇಟ್ಟಿರುವ ಪ್ರಸ್ತಾಪವಾಗಿದೆ. ಈ ಕುರಿತು ಅಂತಿಮವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುವುದನ್ನು ಕುಮಾರಸ್ವಾಮಿ ಅವರಿಗೇ ಬಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಸ್ತುತ ಈ ಕ್ಷೇತ್ರವನ್ನು ಜೆಡಿಎಸ್ ನ ಹಿರಿಯ ನಾಯಕ ಜಿ ಟಿ ದೇವೇಗೌಡ ಅವರು ಪ್ರತಿನಿಧಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾ ರಾ ಮಹೇಶ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕುಮಾರಸ್ವಾಮಿ ಅವರು ಮೈಸೂರು ಕಡೆ ಮುಖ ಮಾಡಿದರೆ ಹಳೆ ಮೈಸೂರು ಭಾಗದ ರಾಜಕೀಯ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.








