ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ದಿನಾಂಕ ಹಾಗೂ ಸಮಯ ಅಧಿಕೃತವಾಗಿ ನಿಗದಿಯಾಗಿದೆ.
ಜೂನ್ 3, ಬುಧವಾರ ಸಂಜೆ 4.05ಕ್ಕೆ ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಸರಳ ಸಮಾರಂಭದ ಮೂಲಕ ಪದಗ್ರಹಣ ನಡೆಯಲಿದೆ.
ಶನಿವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಶಾಸಕಾಂಗ ಪಕ್ಷದ ನಾಯಕರಾಗಿ ಏಕಮತದಿಂದ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ರಾಜ್ಯ ರಾಜಕೀಯದ ಬಹು ದಿನಗಳ ಕುತೂಹಲಕ್ಕೂ ತೆರೆ ಬಿದ್ದಿದೆ.
ಈ ಕುರಿತು ಮಾತನಾಡಿದ KPCC ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ಜೂನ್ 3ರಂದು ಡಿಕೆಶಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ. ಯಾವುದೇ ವಿಶೇಷ ಪಾಸ್ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಅದೇ ವೇಳೆ, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಹಿನ್ನೆಲೆ ಅನಗತ್ಯವಾಗಿ ಅಭಿಮಾನಿಗಳು ಬೆಂಗಳೂರಿಗೆ ಬರಬಾರದು ಎಂದು ಮನವಿ ಮಾಡಿರುವ ಅವರು, ಸರಳತೆ ಮತ್ತು ಶಿಸ್ತಿನೊಂದಿಗೆ ಕಾರ್ಯಕ್ರಮ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದಿದ್ದಾರೆ.








