ಬೆಂಗಳೂರು : ತಿರುಪತಿಯ ತಿರುಮಲದಲ್ಲಿ ಕರ್ನಾಟಕ ರಾಜ್ಯ ಛತ್ರಕ್ಕೆ ಸೇರಿದ ಜಾಗದಲ್ಲಿ ನೂತನ ವಸತಿ ಸಮುಚ್ಚಯ ನಿರ್ಮಾಣವೂ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 200 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.
ಹೆಚ್ ಡಿಕೆ ಟ್ವೀಟ್ ನಲ್ಲಿ..
ನಾನು ಸಿಎಂ ಆಗಿದ್ದಾಗ ಕೇವಲ 26 ಕೋಟಿ ಆಗಿದ್ದ ತಿರುಪತಿ ವಸತಿ ಸಮುಚ್ಚಯ ಯೋಜನೆ, ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ, ಒಂದೇ ವರ್ಷದಲ್ಲಿ 200 ಕೋಟಿಗೆ ಏರಿಕೆಯಾಗಿದೆ. ಕೋವಿಡ್ ನಿಭಾಯಿಸಲು ಸರ್ಕಾರಕ್ಕೆ ಬೆಂಬಲ ನೀಡೋಣ. ಆದರೆ ಕೋವಿಡ್ ಕಾಲದ ಈ ಲೂಟಿಗಲ್ಲ. ಸರ್ಕಾರ ಕೂಡಲೇ ಈ ಯೋಜನೆಯನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದ್ದಾರೆ. 
ಮತ್ತೊಂದು ಟ್ವೀಟ್ ನಲ್ಲಿ..
ಈ ಯೋಜನೆಗೆ ರಾಜ್ಯ ಸರ್ಕಾರ ಟಿಟಿಡಿಗೆ 200 ಕೋಟಿ, ವಿನ್ಯಾಸ, ವಾಸ್ತುಶಿಲ್ಪಕ್ಕಾಗಿ ಖಾಸಗಿ ಸಂಸ್ಥೆಗೆ ಯೋಜನೆಯ ಶೇ.5 (10 ಕೋಟಿ) ಅನ್ನು ನೀಡುತ್ತಿದೆ. ಈ ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯದ ಲೋಕೋಪಯೋಗಿ ಇಲಾಖೆ ಶಕ್ತವಲ್ಲವೇ? ವಿನ್ಯಾಸ ರೂಪಿಸಲು ಇಲಾಖೆಯಲ್ಲಿ ಯಾರೂ ಇಲ್ಲವೇ? ಕೋವಿಡ್ ಸಂಕಷ್ಟ ಕಾಲದಲ್ಲಿ ಈ ಯೋಜನೆ ಅಗತ್ಯವಾದರೂ ಏನು ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ ಕುಮಾರಸ್ವಾಮಿ.









