ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಸಕಾಲಕ್ಕೆ ಆಂಬ್ಯುಲೆನ್ಸ್, ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಇಬ್ಬರು ಮೃತ ಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೆಂಡಾಮಂಡಲರಾಗಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಕರೆಸಿಕೊಂಡು ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಂಬ್ಯುಲೆನ್ಸ್ ಸಕಾಲಕ್ಕೆ ಬಾರದೆ ಗಿರಿನಗರದಲ್ಲಿ ಕೋವಿಡ್ ರೋಗಿ ಮೃತಪಟ್ಟಿದ್ದಾರೆ. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ವೃದ್ಧೆ ಮೃತಪಟ್ಟಿದ್ದಾರೆ. ಹಾಗಾದರೆ ಅಂಬ್ಯುಲೆನ್ಸ್ ಗಳು ಎಲ್ಲಿಗೆ ಹೋದವು. ಕೊರತೆ ಆಗಿದ್ದರೆ ಅಂಬ್ಯುಲೆನ್ಸ್ ಇನ್ನೂ ಯಾಕೆ ಖರೀದಿ ಮಾಡಿಲ್ಲ.
ಹಾಗಾದ್ರೆ ಕೋವಿಡ್ ಕೇರ್ ಗೆ ಕೊಟ್ಟ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಹಾಸಿಗೆ ಸಿಗದೆ ವೃದ್ದೆ ಮೃತಪಟ್ಟಿದ್ದಾರೆ. ಹಾಗಾದರೆ ಖಾಸಗಿ ಆಸ್ಪತ್ರೆಗಳು ಕೊಟ್ಟ ಬೆಡ್ ಗಳು ಎಲ್ಲಿ ಹೋದವು. ಹಾಸಿಗೆಗಳ ವ್ಯವಸ್ಥೆ ಮಾಡಲು ಆರಂಭಿದ ಕೇಂದ್ರೀಕೃತ ವ್ಯವಸ್ಥೆ ಏನು ಮಾಡುತ್ತಿದೆ. ಪ್ರತಿ ಪಕ್ಷಗಳು ಕೋವಿಡ್ ಗೆ ಖರ್ಚಾದ ಹಣ ಎಲ್ಲಿ ಹೋಯಿತು ಎಂದು ಕೇಳುತ್ತಿದ್ದಾರೆ. ಅವರಿಗೆ ನಾನು ಏನು ಉತ್ತರ ಕೊಡಲಿ ಎಂದು ಅಧಿಕಾರಗಳನ್ನು ಝಾಡಿಸಿದರು. ಎರಡು ದಿನಗಳಲ್ಲಿ ಎಲ್ಲಾ ವ್ಯವಸ್ಥೆ ಸರಿಯಾಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ವೇಳೆ ಲೋಪವಾಗಿರುವುದನ್ನು ಒಪ್ಪಿಕೊಂಡ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.








