ಸಚಿನ್ ತೆಂಡುಲ್ಕರ್‍ನ ಕ್ಲಾಸ್ & ಮಾಸ್ ಶೈಲಿಯೂ ಅಲ್ಲ.. ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಪ್ರವೃತ್ತಿಯೂ ಅಲ್ಲ…ಯಾರ ಹೋಲಿಕೆಯೂ ಅಲ್ಲವೇ ಅಲ್ಲ.. ಥೇಟ್ ಶುಬ್ಮನ್ ಗಿಲ್ ಸ್ಟೈಲ್ ಅಷ್ಟೇ..! ಯಾರ ಅನುಕರಣೆಯೂ ಇಲ್ಲ.. ಚಿಕ್ಕಂದಿನಿಂದ ತಾನೂ ಹೇಗೆ ಆಡಿಕೊಂಡು ಬಂದಿದ್ದೇನೋ ಅದೇ ಆಟ ಅಷ್ಟೇ..! ಇದು ಶುಭ್ಮನ್ ಗಿಲ್ ಸ್ಪೇಷಾಲಿಟಿ..!
25ರ ಹರೆಯದಲ್ಲೇ ಟೀಮ್ ಇಂಡಿಯಾದ ನಾಯಕನ ಪಟ್ಟ.. ಹಾಗೇ ನೋಡಿದ್ರೆ ಟೀಮ್ ಇಂಡಿಯಾದ ನಾಯಕನ ಸ್ಥಾನಮಾನ ಅಂದ್ರೆ ಅದು ಬೆಂಕಿಯಲ್ಲಿ ಕಾದ ಬಾನಲೆ..! ಯಾವಾಗ ಏನು ಬೇಕಾದ್ರೂ ಆಗಬಹುದು.. ಕೋಟಿ ಕೋಟಿ ಅಭಿಮಾನಿಗಳ ನಿರೀಕ್ಷೆಗಳು.. ಒಂದು ನಿರ್ಧಾರದ ಎಡವಟ್ಟಿಗೆ ಟೀಕೆಗಳ ಸುರಿಮಳೆ..ಆರೋಪಗಳು.. ಕ್ರಿಕೆಟ್ ಪಂಡಿತರ ವಿಶ್ಲೇಷಣೆ..ಅಬ್ಬಾಬ್ಬ ಒಂದಲ್ಲ.. ಎರಡಲ್ಲ.. ಸಾಲು ಸಾಲು ಸವಾಲುಗಳು ಟೀಮ್ ಇಂಡಿಯಾದ ನಾಯಕನಿಗಿರುತ್ತದೆ. ಬಹುಶಃ ವಿಶ್ವ ಕ್ರಿಕೆಟ್ ತಂಡದ ಯಾವುದೇ ನಾಯಕನೂ ಎದುರಿಸದ ಸವಾಲುಗಳನ್ನು ಟೀಮ್ ಇಂಡಿಯಾದ ನಾಯಕ ಎದುರಿಸಬೇಕಾಗುತ್ತದೆ. ಅಷ್ಟೊಂದು ಅಗ್ನಿಪರೀಕ್ಷೆ ಟೀಮ್ ಇಂಡಿಯಾದ ನಾಯಕನಿಗಿರುತ್ತದೆ.
ಹಾಗೇ ನೋಡಿದ್ರೆ ಶುಭ್ಮನ್ ಗಿಲ್ ಈ ಎಲ್ಲಾ ಸವಾಲು, ಅಗ್ನಿಪರೀಕ್ಷೆಗಳನ್ನು ಮೆಟ್ಟಿ ನಿಲ್ಲುವ ಸೂಚನೆ ನೀಡಿದ್ದಾರೆ. ಒಬ್ಬ ಆಟಗಾರನ ಕರ್ತವ್ಯ, ಒಬ್ಬ ನಾಯಕನ ಜವಾಬ್ದಾರಿಯನ್ನು ಅಷ್ಟೇ ಸುಲಲಿತವಾಗಿ ನಿಭಾಯಿಸುತ್ತಿರುವ ರೀತಿಗೆ ಸಲಾಂ ಅನ್ನಲೇಬೇಕು.
ಅಂದ ಹಾಗೇ, ಭವಿಷ್ಯದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯ ದಾಖಲೆಗಳು ಗಿಲ್ ಅಳಿಸಿ ಹಾಕ್ತಾರೆ ಅನ್ನೋದನ್ನು ಈಗಲೇ ಹೇಳುವುದು ಕಷ್ಟ.. ಆದ್ರೆ ಗಿಲ್ ಆಡುವ ರೀತಿ ನೋಡಿದ್ರೆ ಕ್ರಿಕೆಟ್ ಗಾಡ್ ಹಾಗೂ ಚೇಸಿಂಗ್ ಗಾಡ್‍ನ ಹಾದಿಯಲ್ಲೇ ಮುನ್ನಡೆಯುತ್ತಾರೆ ಅನ್ನೋ ಆಶಾಭಾವನೆಯಂತೂ ಇದ್ದೇ ಇದೆ.
ಸದ್ಯ ಶುಭ್ಮನ್ ಗಿಲ್ ಟೀಮ್ ಇಂಡಿಯಾದ ರಾಜಕುಮಾರ. ಮುಂದೆ ಮಹಾರಾಜ ಆಗೋ ಸಾಧ್ಯತೆಗಳು ದಟ್ಟವಾಗಿವೆ. ನಾಯಕನಾಗಿ ಇಂಗ್ಲೆಂಡ್ ನೆಲದಲ್ಲಿ ಆಡಿರುವ ರೀತಿಯನ್ನು ನೋಡಿದಾಗ ಟೀಮ್ ಇಂಡಿಯಾದ ಸದ್ಯದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗ್ತಾರೆ ಅನ್ನೋ ವಿಶ್ವಾಸವಂತೂ ಮೂಡಿದೆ.
ಹಾಗೇ ನೋಡಿದ್ರೆ, ಶುಭ್ಮನ್ ಗಿಲ್ ಆಟದಲ್ಲಿ ಯಾವುದೇ ಒತ್ತಡಗಳಿಲ್ಲ.. ಆರಾಮವಾಗಿ ಆಡಿಕೊಂಡು ಹೋಗುತ್ತಿದ್ದಾರೆ. ಕ್ರಿಕೆಟ್ ಆಟವನ್ನು ಎಂಜಾಯ್ ಮಾಡಿಕೊಂಡು ಆಡ್ತಾ ಇದ್ದಾರೆ. ಯಾರ ಕಾಪಿ ಪೇಸ್ಟ್ ಇಲ್ಲದೆ ತನ್ನದೇ ಶೈಲಿಯಲ್ಲಿ ಆಡುತ್ತಿರುವ ಗಿಲ್ ಆಟವನ್ನು ನೋಡಿದಾಗ ಯಾವುದೇ ಆತಂಕವಿರುವುದಿಲ್ಲ. ಎಲ್ಲವನ್ನು ಲೀಲಾಜಾಲ. ನಾಯಕನ ಜವಾಬ್ದಾರಿಯನ್ನು ಅರಿತುಕೊಂಡು ಆಡುವ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ವಯಸ್ಸು 25 ಆದ್ರೂ ಹುಡುಗಾಟದ ಆಟವಿದ್ರೂ ಪ್ರಬುದ್ಧತೆ ಇದೆ. ಎದುರಾಳಿ ತಂಡದ ಮೈಂಡ್ ಗೇಮ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬೌಲರ್‍ಗಳನ್ನು ಕನ್‍ಫ್ಯೂಸ್ ಮಾಡಿಕೊಂಡು ತಂಡಕ್ಕೆ ಭದ್ರ ಅಡಿಪಾಯ ಹಾಕುವಂತಹ ತಂತ್ರಗಾರಿಕೆಯೂ ಇದೆ. ಸೈಲೆಂಂಟ್ ಆಗಿಯೇ ತಂಡದ ರನ್ ಗತಿಯನ್ನು ಏರಿಸುವಾಗ ಅಬ್ಬರ ಕಂಡ್ರೂ ಕ್ಷಣ ಮಾತ್ರದಲ್ಲೇ ಅಷ್ಟೇ ತಾಳ್ಮೆಯೂ ಗಿಲ್ ಬ್ಯಾಟಿಂಗ್ ನಲ್ಲಿದೆ.
ಹೀಗಾಗಿಯೇ ಇಂಗ್ಲೆಂಡ್ ನೆಲದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಗಿಲ್ ತನ್ನ ಹೆಸರಿಗೆ ಬರೆಸಿಕೊಳ್ಳುತ್ತಿದ್ದಾರೆ. ಚೊಚ್ಚಲ ನಾಯಕತ್ವದಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ಗಿಲ್, ನಾಯಕತ್ವಗಿಂತಲೂ ಬ್ಯಾಟಿಂಗ್‍ನಲ್ಲಿ ಪ್ರಕಾಶಿಸುತ್ತಿದ್ದಾರೆ.
ಸಾಮಾನ್ಯವಾಗಿ ವಿದೇಶಿ ನೆಲದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವಾಗ ಸಾಕಷ್ಟು ಒತ್ತಡಗಳಿರುತ್ತವೆ. ಆದ್ರೆ ಗಿಲ್ ಎಲ್ಲಾ ಟೆನ್ಶನ್‍ಗಳನ್ನು ಸುಸೂತ್ರವಾಗಿ ನಿಭಾಯಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಅದರಲ್ಲೂ ಬ್ಯಾಟಿಂಗ್‍ನಲ್ಲಿ ಯಾವುದೇ ಒತ್ತಡಗಳು ಅವರ ಮುಖದಲ್ಲಿ ಕಾಣುವುದಿಲ್ಲ. ಅದರಲ್ಲೂ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‍ನಲ್ಲಿ ದ್ವಿಶತಕ, ಎರಡನೇ ಇನಿಂಗ್ಸ್‍ನಲ್ಲಿ 150 ಪ್ಲಸ್ ರನ್ ಹೊಡೆದ ರೀತಿಯಂತೂ ಬಣ್ಣಿಸಲು ಸಾಧ್ಯವಿಲ್ಲ. ಇಂಗ್ಲೀಷ್ ಬೌಲರ್‍ಗಳನ್ನು ತನ್ನ ಹುಡುಗಾಟದ ದಿನದಲ್ಲಿ ಆಡುತ್ತಿದ್ದ ರೀತಿಯಲ್ಲಿ ಕಾಡಿದ ಗಿಲ್ ಟೀಮ್ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಆಗುವ ಎಲ್ಲಾ ಸೂಚನೆಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ರಿಷಬ್ ಪಂತ್ ಜೊತೆ ಜಿದ್ದಿಗೆ ಬಿದ್ದಂಗೆ ಆಡುತ್ತಿದ್ದಂತೆ ಕಾಣುತ್ತದೆ.
ಒಟ್ಟಿನಲ್ಲಿ ಶುಭ್ಮನ್ ಗಿಲ್ ಅವರ ಮನಮೋಹಕ ಆಟದ ಮುಂದೆ ಹಲವು ದಶಕಗಳ ದಾಖಲೆಗಳು ಉಢೀಸ್ ಆಗಿವೆ. ಅದರಲ್ಲೂ ಟೀಮ್ ಇಂಡಿಯಾದ ಟೆಸ್ಟ್ ಕ್ರಿಕೆಟ್‍ನ ಭವಿಷ್ಯದ ಪರಂಪರೆಯನ್ನು ಜೈಸ್ವಾಲ್, ಗಿಲ್, ಪಂತ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತಿದೆ. ಯಾವುದಕ್ಕೂ ಕಾದು ನೋಡೋಣ…!








