ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕೊಲೆ ಮತ್ತು ಶವ ಹೂತ ಪ್ರಕರಣ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆಗೆ ಆದೇಶ ನೀಡಿದ್ದು, ಈ ಬಗ್ಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
‘ಧರ್ಮಸ್ಥಳ ಹೆಸರಿಗೆ ಕಳಂಕ ತಂದರೆ ಸರ್ಕಾರ ಸರ್ವನಾಶವಾಗುತ್ತೆ’
ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಅಥವಾ ಆ ಸ್ಥಳದ ಪ್ರತಿಷ್ಠೆಗೆ ಕೆಟ್ಟ ಹೆಸರು ತರಕೂಡದು. ಧರ್ಮಸ್ಥಳ ನಮ್ಮ ಭಕ್ತಿ ಮತ್ತು ನಂಬಿಕೆಯ ಸಂಕೇತ. ಅದರ ಬಗ್ಗೆ ಯಾವುದೇ ಶಂಕೆಯನ್ನು ಹುಟ್ಟಿಸುವ ಪ್ರಯತ್ನ ಮಾಡಿದರೆ ಈ ಸರ್ಕಾರ ಸರ್ವನಾಶವಾಗುತ್ತದೆ ಎಂದು ರೆಡ್ಡಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ SIT ರಚಿಸಿದ್ದು, ಇದನ್ನು ಗಾಲಿ ರೆಡ್ಡಿ ಪ್ರಶ್ನಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯ ಭಾಗ. ಧರ್ಮಸ್ಥಳದಂತಹ ಪವಿತ್ರ ಸ್ಥಳವನ್ನು ರಾಜಕೀಯ ರೂಪಾಂತರಗೊಳಿಸೋದು ಸರಿಯಲ್ಲ. ಜನರ ಭಕ್ತಿಯನ್ನು ಕುಗ್ಗಿಸುವ ಪ್ರಯತ್ನ ಇದಾಗಿದ್ದು, ಇದರಿಂದಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೆಡ್ಡಿ ಹೇಳಿದ್ದಾರೆ.
ಇದು ರಾಜಕೀಯ ಕೃತ್ಯ ಎಂದು ಆರೋಪ
ಅಲ್ಲಿಯವರನ್ನು ದೋಷಿಗಳಂತೆ ಚಿತ್ರಿಸುವುದೂ ಸರಿಯಲ್ಲ. ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಸ್ಥಾನವು ಸಾವಿರಾರು ಜನರಿಗೆ ಆಶ್ರಯ ನೀಡಿರುವ ಪವಿತ್ರ ಸ್ಥಳ. ಅಲ್ಲಿ ನಡೆದಿರುವ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಬೇಕಿತ್ತು. ಆದರೆ ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದರಿಂದ ಸಮಾಜದಲ್ಲಿ ಗೊಂದಲ ಮೂಡುತ್ತಿದೆ ಎಂದು ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಹಿಂದೂ ವಿರೋಧಿ ನೀತಿಯ ಭಾಗವೇ?
‘ಕಾಂಗ್ರೆಸ್ ಸರ್ಕಾರ ಹೀಗೆ ಮಾಡುವುದು ನವೀನ ಘಟನೆಯಲ್ಲ. ಇದು ಹಿಂದೂ ತತ್ವ, ಸಂಸ್ಕೃತಿ, ಧರ್ಮದ ವಿರುದ್ಧ ನಡೆಯುವ ರಾಜಕೀಯದ ಭಾಗವಾಗಿಯೇ ಕಾಣುತ್ತಿದೆ. ಧರ್ಮಸ್ಥಳದಂತಹ ಕ್ಷೇತ್ರಗಳನ್ನು ರಾಜಕೀಯ ವ್ಯವಹಾರಕ್ಕೆ ಬಳಸುವುದು ದುರ್ಭಾಗ್ಯಕರ’ ಎಂದು ರೆಡ್ಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ
‘ಧರ್ಮಸ್ಥಳ ನಮ್ಮ ನಂಬಿಕೆಯ ಕೇಂದ್ರ’
ಅಲ್ಲಿ ನಡೆದಿರುವ ಯಾವುದೇ ಘಟನೆಗೆ ನ್ಯಾಯ ದೊರಕಬೇಕು, ಆದರೆ ಧರ್ಮಸ್ಥಳದ ಪ್ರತಿಷ್ಠೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.








