ಮುಂಬೈ, : ಮುಂಬೈಯನ್ನು ಜಾಗತಿಕ ಮಟ್ಟದ ಸಮ್ಮೇಳನಗಳು ಹಾಗೂ ಬಿಸಿನೆಸ್ ಈವೆಂಟ್‌ಗಳ ಪ್ರಮುಖ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ (JWCC) ‘ಕಾನ್ಫರೆನ್ಸ್ ಅಂಬಾಸಿಡರ್ ಪ್ರೋಗ್ರಾಂ’ ಆರಂಭಿಸಿದೆ.
ಮಹಾರಾಷ್ಟ್ರ ಕನ್ವೆನ್ಷನ್ ಬ್ಯೂರೋ (MCB) ಬೆಂಬಲದೊಂದಿಗೆ ಹಾಗೂ ಇಂಟರ್‌ನ್ಯಾಷನಲ್ ಕಾಂಗ್ರೆಸ್ ಅಂಡ್ ಕನ್ವೆನ್ಷನ್ ಅಸೋಸಿಯೇಷನ್ (ICCA) ಜ್ಞಾನ ಪಾಲುದಾರರಾಗಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ.
ದೇಶದ ವಿವಿಧ ಕ್ಷೇತ್ರಗಳ ಪ್ರಮುಖ ಸಂಘಟನೆಗಳ ನಾಯಕರು ಹಾಗೂ ತಜ್ಞರನ್ನು ‘ಕಾನ್ಫರೆನ್ಸ್ ಅಂಬಾಸಿಡರ್’ಗಳಾಗಿ ಗುರುತಿಸಿ, ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಮುಂಬೈಗೆ ತರಲು ಅವರ ಮೂಲಕ ಪ್ರಯತ್ನಿಸಲಾಗುತ್ತದೆ. ಅಂಬಾಸಿಡರ್‌ಗಳು ತಮ್ಮ ವೃತ್ತಿಪರ ಸಂಪರ್ಕ ಮತ್ತು ಕ್ಷೇತ್ರದ ಪರಿಣತಿಯನ್ನು ಬಳಸಿಕೊಂಡು ಸಮ್ಮೇಳನಗಳಿಗಾಗಿ ಬಿಡ್ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಬಿಡ್ ಸಿದ್ಧತೆ, ಅಂತಾರಾಷ್ಟ್ರೀಯ ಸಂಪರ್ಕ, ಪ್ರಚಾರ, ಸ್ಥಳ ಪರಿಶೀಲನೆ ಹಾಗೂ ಸರ್ಕಾರದೊಂದಿಗೆ ಸಮನ್ವಯ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯಲ್ಲಿ JWCC ನೆರವು ನೀಡಲಿದೆ. ಅರ್ಹ ಅಂಬಾಸಿಡರ್‌ಗಳಿಗೆ ಬಿಡ್ ಸಿದ್ಧತೆ, ಅಂತಾರಾಷ್ಟ್ರೀಯ ಪ್ರಯಾಣ ಮತ್ತು ಇತರ ವೆಚ್ಚಗಳಿಗಾಗಿ ‘ಕಾನ್ಫರೆನ್ಸ್ ಅಂಬಾಸಿಡರ್ ಗ್ರಾಂಟ್’ ಮೂಲಕ ಆರ್ಥಿಕ ನೆರವೂ ದೊರೆಯಲಿದೆ.
Events Industry Council ಮತ್ತು Oxford Economics ವರದಿ ಪ್ರಕಾರ, 2025ರಲ್ಲಿ ವಿಶ್ವದ 180ಕ್ಕೂ ಹೆಚ್ಚು ದೇಶಗಳಲ್ಲಿ ನಡೆದ ಬಿಸಿನೆಸ್ ಈವೆಂಟ್‌ಗಳಲ್ಲಿ 1.65 ಬಿಲಿಯನ್ ಜನರು ಭಾಗವಹಿಸಿದ್ದು, 1.3 ಟ್ರಿಲಿಯನ್ ಅಮೆರಿಕನ್ ಡಾಲರ್ ನೇರ ವೆಚ್ಚವಾಗಿದೆ. ಪರೋಕ್ಷ ಪರಿಣಾಮಗಳನ್ನು ಸೇರಿಸಿದರೆ ಈ ಕ್ಷೇತ್ರವು ಜಾಗತಿಕವಾಗಿ 3.1 ಟ್ರಿಲಿಯನ್ ಡಾಲರ್‌ಗಳ ವ್ಯಾಪಾರ ಚಟುವಟಿಕೆ ಮತ್ತು 24.2 ಮಿಲಿಯನ್ ಉದ್ಯೋಗಗಳಿಗೆ ಬೆಂಬಲ ನೀಡಿದೆ.
ಅಂತಾರಾಷ್ಟ್ರೀಯ ಸಮ್ಮೇಳನಗಳ ಆತಿಥ್ಯದಲ್ಲಿ ಈಗಾಗಲೇ JWCC ಗಮನಾರ್ಹ ಸಾಧನೆ ಮಾಡಿದೆ. World Congress of Accountants, Global Fintech Fest, World Green Building Council Congress ಮತ್ತು KubeCon + CloudNativeCon India ಸೇರಿದಂತೆ ಹಲವು ಪ್ರಮುಖ ಜಾಗತಿಕ ಕಾರ್ಯಕ್ರಮಗಳು ಇಲ್ಲಿ ನಡೆದಿವೆ.
ಮುಂಬರುವ ವರ್ಷಗಳಲ್ಲಿ International Congress on Occupational Health 2027, FDI World Dental Congress 2027, IDF World Dairy Summit 2027 ಸೇರಿದಂತೆ ಹಲವು ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನಗಳು ಮುಂಬೈನಲ್ಲಿ ನಡೆಯಲಿವೆ.
ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಖಂಡಾರೆ ಮಾತನಾಡಿ, ಈ ಕಾರ್ಯಕ್ರಮವು ಜಾಗತಿಕ ಬಿಸಿನೆಸ್ ಈವೆಂಟ್‌ಗಳ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂದರು. ಭಾರತವು ICCA ರ‍್ಯಾಂಕಿಂಗ್‌ನಲ್ಲಿ 2022ರ 37ನೇ ಸ್ಥಾನದಿಂದ 2025ರಲ್ಲಿ 26ನೇ ಸ್ಥಾನಕ್ಕೆ ಏರಿರುವುದು ದೇಶದ ಹೆಚ್ಚುತ್ತಿರುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಜ್ಞಾನ ವಿನಿಮಯ, ವೃತ್ತಿಪರ ಸಹಕಾರ, ಹೊಸ ಆವಿಷ್ಕಾರ ಹಾಗೂ ಆರ್ಥಿಕ ಬೆಳವಣಿಗೆಗೆ ಅಂತಾರಾಷ್ಟ್ರೀಯ ಸಮ್ಮೇಳನಗಳು ಪ್ರಮುಖ ವೇದಿಕೆಯಾಗಿರುವುದರಿಂದ, ಈ ಕಾರ್ಯಕ್ರಮದ ಮೂಲಕ ಭಾರತಕ್ಕೆ ಇನ್ನಷ್ಟು ಜಾಗತಿಕ ಸಮ್ಮೇಳನಗಳನ್ನು ತರುವ ಗುರಿಯನ್ನು ಹೊಂದಲಾಗಿದೆ.








