ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನ: ಪಾಂಡವಪುರದಲ್ಲಿ ಕೃಷಿ ಪರಿಣತರಿಂದ ತರಬೇತಿ
ಮಂಡ್ಯ: ಪಾಂಡವಪುರ ತಾಲ್ಲೂಕಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ (ಕೃಷಿ ಸಖಿಯರು) ಒಟ್ಟು 120 ಮಂದಿಗೆ ‘ಆತ್ಮ’ ಯೋಜನೆಯಡಿ ವಿಶೇಷ ಕಾರ್ಯಾಗಾರ ಉಳಿಗೆರೆಯಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ದರ್ಶನ್ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನದಂತೆ, ಪಾಂಡವಪುರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ವತಿಯಿಂದ ಹಾಗೂ ಪುಟ್ಟಣ್ಣಯ್ಯ ಫೌಂಡೇಷನ್ ಮತ್ತು ಇತರ ಎನ್ ಜಿ ಒಗಳ ಸಂಯುಕ್ತ ಆಶ್ರಯದಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಳಿಗೆರೆಯಲ್ಲಿರುವ ‘ಹೊಸ ಜೀವನ ದಾರಿ ಸಂಸ್ಥೆ’ಯ ಸಭಾಂಗಣದಲ್ಲಿ ಈ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ವಿಶೇಷ ತರಬೇತಿ: ನೈಸರ್ಗಿಕ ಕೃಷಿ ಪದ್ಧತಿಗಳು, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ ಹಾಗೂ ಸಮುದಾಯ ಮಟ್ಟದಲ್ಲಿ ರೈತರಿಗೆ ಮಾರ್ಗದರ್ಶನ ನೀಡುವ ಕುರಿತು ಪರಿಣತರಿಂದ ಕೃಷಿ ಸಖಿಯರಿಗೆ ವಿಸ್ತೃತವಾದ ತರಬೇತಿ ಹಾಗೂ ಮಾಹಿತಿ ನೀಡಲಾಯಿತು.
ಗ್ರಾಮೀಣ ಭಾಗದ ಮಹಿಳಾ ಕೃಷಿ ಸಖಿಯರನ್ನು ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಾಗಾರಕ್ಕೆ ಸ್ಥಳೀಯ ರೈತರು ಹಾಗೂ ಕೃಷಿ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಪುಟ್ಟಣ್ಣಯ್ಯ ಫೌಂಡೇಷನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಣಜಿತ್ ಎಚ್.ಎನ್. ಹಾಗೂ ಇಲಾಖೆಯ ಇತರ ಪ್ರಮುಖ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.








