ಕ್ರಿಕೆಟ್ ಶ್ರೀಮಂತ.. ಶ್ರೀಮಂತರು ನೋಡೋ ಆಟ… ಆಡೋದು ಮಾತ್ರ ಬಡವರ ಮಕ್ಕಳೇ..?
ಹಿಂದೊಂದಿತ್ತು ಕಾಲ.. ಕ್ರಿಕೆಟ್ ಶ್ರೀಮಂತ ಕ್ರೀಡೆ.. ಕ್ರಿಕೆಟ್ ಶ್ರೀಮಂತರ ಆಟ… ಅಧಿಕಾರ ಇದ್ದವರು ಕ್ರಿಕೆಟ್ ಆಡ್ತಾರೆ..ದುಡ್ಡಿದವರು ಕ್ರಿಕೆಟ್ ಆಡಬಹುದು..! ಹೌದು, ನೂರಾರು ವರುಷಗಳ ಹಿಂದೆ ಕ್ರಿಕೆಟ್ ಆಟ ಬರೀ ಮೋಜಿನ ಆಟವಾಗಿತ್ತು. ಬ್ರಿಟಿಷ್ ಪಾರುಪತ್ಯ ಹೊಂದಿದ್ದ ದೇಶಗಳಲ್ಲಿ ಅಲ್ಲಿನ ಅಧಿಕಾರಿಗಳು ಟೈಮ್ ಪಾಸ್ಗಾಗಿ ಆಡುತ್ತಿದ್ದ ಆಟವೇ ಕ್ರಿಕೆಟ್..!
ದೊಡ್ಡವರು ಆಡುತ್ತಿದ್ದ ಆಟವನ್ನು ನಿಬ್ಬೆರೆಗಾಗಿ ನೋಡುತ್ತಿದ್ದ ಬಡವರ ಮಕ್ಕಳು ಚೆಂಡು – ಬ್ಯಾಟ್ನ ಸದ್ದಿಗೆ ಚಪ್ಪಾಳೆ ಹೊಡೆದು ಅವರನ್ನು ಹುರಿದುಂಬಿಸುತ್ತಿದ್ದರು. ಹೀಗೆ ಆಟವನ್ನು ನೋಡಿಕೊಂಡು ಗುರುವಿಲ್ಲದ ಏಕಲವ್ಯನಂತೆ ಕ್ರಿಕೆಟ್ ಆಟವನ್ನು ಕರಗತ ಮಾಡಿಕೊಂಡು ತಮ್ಮದೇ ದೇಶದ ತಂಡವನ್ನು ಕಟ್ಟಿಕೊಂಡಿದ್ದಾರೆ. ಇವತ್ತು ಕ್ರಿಕೆಟ್ ಜಗತ್ತಿನ ಎಂಟು- ಹತ್ತು ರಾಷ್ಟ್ರಗಳಲ್ಲಿ ಕ್ರಿಕೆಟ್ ಪ್ರಮುಖ ಕ್ರೀಡೆಯಾಗಿ ಬೆಳೆದಿರುವುದಕ್ಕೆ ಪ್ರಮುಖ ಕಾರಣ ಇಂಗ್ಲೀಷರು ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿಯೇ ಅವರನ್ನು ಕ್ರಿಕೆಟ್ ಜನಕರು ಎಂದು ಕರೆಯುವುದು. ಅಷ್ಟೇ ಅಲ್ಲ, ಆರಂಭದಲ್ಲಿ ಕ್ರಿಕೆಟ್ ಆಟಕ್ಕೆ ಒಂದು ನಿಯಮ, ಪಾಲಿಸಿಯ ಜೊತೆಗೆ ನೆರವಿನ ಹಸ್ತವನ್ನು ನೀಡಿದ್ದು ಕೂಡ ಬ್ರಿಟಿಷರು. ಕಾಲ ಬದಲಾದಂತೆ ಇಂಗ್ಲೆಂಡ್ ತಂಡಕ್ಕಿಂತ ಬಲಿಷ್ಠ ತಂಡಗಳು ರೂಪುಗೊಂಡವು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಿಂತಲೂ ಶ್ರೀಮಂತ ಕ್ರಿಕೆಟ್ ಮಂಡಳಿ ಭಾರತ/ ಬಿಸಿಸಿಐ ಈಗ ವಿಶ್ವ ಕ್ರಿಕೆಟ್ನ್ನು ಕೈ ಬೆರಳಿನಲ್ಲಿ ಆಡಿಸುತ್ತಿದೆ.
ಹಾಗಂತ ಭಾರತದಲ್ಲಿ ಕ್ರಿಕೆಟ್ ಎಂಬುದು ಬರೀ ಶ್ರೀಮಂತ – ಬಡವರ ಆಟವಲ್ಲ. ಎಲ್ಲರೂ ಜಾತಿ ಭೇದವಿಲ್ಲದೆ ಆಡುವ ಆಟ. ಇಲ್ಲಿಯವರೆಗೆ ಕ್ರಿಕೆಟ್ ಆಟಕ್ಕೆ ಧರ್ಮದ ಅಂಟು ಅಂಟಿಕೊಂಡಿಲ್ಲ. ಗಲ್ಲಿ ಗಲ್ಲಿಗಳಲ್ಲೂ ಕ್ರಿಕೆಟ್ ಆಟವನ್ನು ಆಡ್ತಾರೆ.. ಆಟವನ್ನು ಆಸ್ವಾದಿಸ್ತಾರೆ. ಹಾಗೇ ನೋಡಿದ್ರೆ ಇವತ್ತಿನ ದಿನಗಳಲ್ಲಿ ಕ್ರಿಕೆಟ್ ಆಟವನ್ನು ಶ್ರೀಮಂತರ ಆಟ ಎಂದು ಹೇಳ್ತಾರೆ.. ದುಡ್ಡಿದವರು ಮಾತ್ರ ತಮ್ಮ ಮಕ್ಕಳನ್ನು ಒಳ್ಳೆಯ ಕ್ರಿಕೆಟ್ ಅಕಾಡೆಮಿಗೆ ಸೇರಿಸ್ತಾರೆ. ಮಧ್ಯಮ, ಬಡ ವರ್ಗದ ಮಕ್ಕಳಿಗೆ ಕ್ರಿಕೆಟ್ ಆಟದ ತರಬೇತಿ ಪಡೆಯಲು ಸಾಧ್ಯವಿಲ್ಲ ಅಂತ ಹೇಳುವವರು ಇದ್ದಾರೆ.
ಆದ್ರೆ ಒಂದು ಮಾತು ನೆನಪಿಡಿ.. ನಿಜ ಎಲ್ಲರೂ ಹೇಳುವಂತೆ ಕ್ರಿಕೆಟ್ ಆಟವನ್ನು ಮೈದಾನದಲ್ಲಿ ನೋಡಲು ಶ್ರೀಮಂತರಿಗಷ್ಟೇ ಸಾಧ್ಯ. ದುಬಾರಿ ಬೆಲೆಯ ಟಿಕೆಟ್ ಕೊಟ್ಟು ಬಡವರು, ಮಧ್ಯಮ ಮಕ್ಕಳು ಹೈಫೈ ಸ್ಟ್ಯಾಂಡ್ನಲ್ಲಿ ಕುಳಿತುಕೊಂಡು ಪಂದ್ಯ ನೋಡಲು ಸಾಧ್ಯವಿಲ್ಲ. ಬಡವರು ಏನಿದ್ರೂ ಗ್ಯಾಲರಿಯಲ್ಲಿ ಕುಳಿತು ಪಂದ್ಯ ನೋಡಬೇಕು. ಅದು ಕೂಡ ರಾತ್ರಿ -ಹಗಲು ನಿದ್ದೆಗೆಟ್ಟು ಟಿಕೆಟ್ ಸಿಕ್ರೆ ಮಾತ್ರ. ಇಲ್ಲದಿದ್ರೆ ಮನೆಯಲ್ಲೇ ಟಿವಿ ನೋಡಿಕೊಂಡು ಪಂದ್ಯ ನೋಡ್ತಾರೆ. ಇತ್ತೀಚಿನ ವರ್ಷಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಪಬ್, ರೆಸಾರ್ಟ್ ಗಳಲ್ಲಿ ನೋಡುತ್ತಿದ್ದಾರೆ.
ಆದ್ರೆ ಅದು ಕೂಡ ಬಡವರ ಮಕ್ಕಳಿಗೆ ಗಗನ ಕುಸುಮವಾಗಿದೆ. ಹಾಗೋ ಹೀಗೋ ಟಿವಿಯಲ್ಲಿ ಮ್ಯಾಚ್ ನೋಡಿಕೊಂಡು ಕ್ರಿಕೆಟ್ ಆಡಬೇಕು.. ದೇಶದ ಪರ ಆಡಬೇಕು ಅಂತ ಬಡತನದ ಬೇಗೆಯಲ್ಲಿ ಅರಳಿದ ಅದೆಷ್ಟೋ ಕ್ರಿಕೆಟಿಗರು ವಿಶ್ವ ಕ್ರಿಕೆಟ್ನಲ್ಲಿ ರಾರಾಜಿಸುತ್ತಿರುವುದು ಹೆಮ್ಮೆಯ ವಿಷ್ಯ.
ಹಾಗೇ ನೋಡಿದ್ರೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಶ್ರೀಮಂತರ ಮಕ್ಕಳು ಆಡಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ರಣಜಿತ್ ಸಿಂಗ್, ಭೂಪಿಂದರ್ ಸಿಂಗ್, ಪಟೌಡಿ ಮೊದಲಾದ ಮಹಾರಾಜ ವಂಶಸ್ಥರು ಆಡಿದ್ದಾರೆ. ಇನ್ನುಳಿದಂತೆ ಮಧ್ಯಮ ಕ್ರಮಾಂಕ ಹಾಗೂ ಬಡವರ ಮಕ್ಕಳೇ ಕ್ರಿಕೆಟ್ ಆಡಿರೋದು. ೭೦-೮೦ರ ದಶಕದ ರನ್ ಮೆಷಿನ್ ಸುನೀಲ್ ಗವಾಸ್ಕರ್, ೧೯೮೩ರ ವಿಶ್ವಕಪ್ ಹೀರೋ ಕಪಿಲ್ ದೇವ್ ಮಧ್ಯಮ ವರ್ಗದ ಕುಟುಂಬದಿಂದ ಬಂದವರು.
ಇನ್ನು ಕ್ರಿಕೆಟ್ ದೇವ್ರು ಸಾಹಿತಿಯ ಮಗ. ತಂದೆ ರಮೇಶ್ ತೆಂಡುಲ್ಕರ್ ಅಕ್ಷರ ಜೋಡಣೆ ಮಾಡಿದ್ರೆ, ಮಗ ಸಚಿನ್ ಮೈದಾನದಲ್ಲಿ ರನ್ ಮಳೆ ಸುರಿಸುತ್ತಾ, ದಾಖಲೆಗಳ ಮೇಲೆ ದಾಖಲೆ ಬರೆದು ವಿಶ್ವ ಕ್ರಿಕೆಟ್ನ ದೃಶ್ಯ ಕಾವ್ಯವನ್ನೇ ಚಿತ್ರಿಸಿದ್ದಾರೆ. ಇನ್ನು ಕಳೆದ ೨೫ ವರ್ಷಗಳಲ್ಲಿ ಟೀಮ್ ಇಂಡಿಯಾದಲ್ಲಿ ಹೆಚ್ಚು ಸದ್ದು ಮಾಡಿರೋದು ಬಡವರ ಮಕ್ಕಳೇ..! ಮುನಾಫ್ ಪಟೇಲ್ ನಿಂದ ಹಿಡಿದು ಇವತ್ತಿನ ಯಶಸ್ವಿ ಜೈಸ್ವಾಲ್ ತನಕ ಬೀದಿಯಲ್ಲಿ ಬೆಳೆದು ವಿಶ್ವ ಕ್ರಿಕೆಟ್ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ಜಹೀರ್ಖಾನ್, ಭಜ್ಜಿ, ಸೆಹ್ವಾಗ್, ರೋಹಿತ್ ಶರ್ಮ, ಕೊಹ್ಲಿ ಕೂಡ ಮಾಮೂಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವವರು.
ಸದ್ಯದ ಟೀಮ್ ಇಂಡಿಯಾದಲ್ಲೂ ಅಷ್ಟೇ.. ಒಬ್ಬ ಕೃಷಿಕನ ಮಗ ಟೀಮ್ ಇಂಡಿಯಾದ ಸಾರಥಿಯಾಗಿದ್ದಾನೆ.. ಪಾನಿಪುರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಜೈಸ್ವಾಲ್ ಟೀಮ್ ಇಂಡಿಯಾದ ಆರಂಭಿಕ ಆಟಗಾರನಾಗಿದ್ದಾನೆ. ಉಪನ್ಯಾಸಕನ ಮಗ ಕೆ.ಎಲ್. ರಾಹುಲ್ ತಂಡಕ್ಕೆ ಆಧಾರಸ್ತಂಭವಾಗಿದ್ದಾನೆ. ಸಣ್ಣ ಬಿಸಿನೆಸ್ ಮ್ಯಾನ್ ಮಗ ರಿಷಬ್ ಪಂತ್ ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾನೆ.. ಕಾವಲುಗಾರನ ಮಗ ಜಡೇಜಾ ತಂಡದ ಹಿರಿಯಣ್ಣನಾಗಿ ಕಾವಲುಗಾರನಾಗಿದ್ದಾನೆ. ಆಟೋ ರಿಕ್ಷಾ ಚಾಲಕನ ಮಗ ಮಹಮ್ಮದ್ ಸಿರಾಜ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾನೆ. ಹೀಗೆ ಭಾರತದಲ್ಲಿ ಅನೇಕ ಯುವ ಕ್ರಿಕೆಟಿಗರು ಬಡತನ, ಹಸಿವು, ಆರ್ಥಿಕ ಸಮಸ್ಯೆಯ ನಡುವೆಯೂ ಕ್ರಿಕೆಟ್ ಆಟವನ್ನು ಉಸಿರಾಗಿಸಿಕೊಂಡು ಟೀಮ್ ಇಂಡಿಯಾ ಪರ ಆಡಿದವರಿದ್ದಾರೆ. ರಣಜಿ, ಐಪಿಎಲ್ನಲ್ಲೂ ಶೈನ್ ಆಗಿದ್ದಾರೆ.
ಇದನ್ನೆಲ್ಲಾ ನೋಡಿದಾಗ ಬಿಸಿಸಿಐ ಶ್ರೀಮಂತ ಕ್ರಿಕೆಟ್ ಮಂಡಳಿ.. ಭಾರತದಲ್ಲಿ ಕ್ರಿಕೆಟ್ ಆಟ ಶ್ರೀಮಂತವಾಗಿದೆ. ಹಾಗೇ ಬಡವರ ಮಕ್ಕಳು ಕೂಡ ಕ್ರಿಕೆಟ್ ಆಡಿ ಶ್ರೀಮಂತರಾಗಿದ್ದಾರೆ. ಇದಕ್ಕೆ ಅನ್ನೋದು ಪ್ರತಿಭೆ ಅನ್ನೋದು ಯಾರ ಸ್ವತ್ತು ಅಲ್ಲ.. ಪ್ರತಿಭೆ, ಅವಕಾಶದ ಜೊತೆಗೆ ಬದ್ಧತೆ, ಶಿಸ್ತು ಅನ್ನು ಪಾಲಿಸಿಕೊಂಡಾಗ ಮಾತ್ರ ಕ್ರಿಕೆಟಿಗನಾಗಬಹುದು.. ಅದನ್ನು ಬಿಟ್ಟು ಕ್ರಿಕೆಟ್ ಆಟ ಅಂದ್ರೆ ಶ್ರೀಮಂತರ ಆಟ ಅನ್ನೋದೆಲ್ಲಾ ಸುಳ್ಳು.. ಹಾಗಂತ ಇದು ಭಾರತೀಯ ಕ್ರಿಕೆಟ್ನಲ್ಲಿ ಮಾತ್ರ ಅಲ್ಲ.. ಬೇರೆ ಬೇರೆ ಕ್ರಿಕೆಟ್ ಆಡುವ ದೇಶದಲ್ಲೂ ಕೂಡ ಬಡವರ ಮಕ್ಕಳೇ ಕ್ರೀಡೆಯಲ್ಲಿ ಯಶ ಸಾಧಿಸಿರುವುದು. ಇದು ಬೇರೆ ಕ್ರೀಡೆಗಳಲ್ಲೂ ಈ ರೀತಿಯ ಅನೇಕ ಉದಾಹರಣೆಗಳು ಸಿಗುತ್ತವೆ
ಸನತ್ ರೈ
+








