ಮೂಲಂಗಿ ಚಟ್ನಿ ರೆಸಿಪಿ ಇಲ್ಲಿದೆ:
ಮೂಲಂಗಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು:
* ಮೂಲಂಗಿ – 2 ಕಪ್ (ತುರಿದುಕೊಂಡದ್ದು)
* ಬ್ಯಾಡಗಿ ಮೆಣಸಿನಕಾಯಿ – 5 ರಿಂದ 6 (ನಿಮ್ಮ ಖಾರಕ್ಕೆ ತಕ್ಕಂತೆ)
* ಎಣ್ಣೆ – 2 ಚಮಚ
* ಬೆಳ್ಳುಳ್ಳಿ ಎಸಳು – 4 ರಿಂದ 5
* ಹುಣಸೆಹಣ್ಣು – ಚಿಕ್ಕ ನಿಂಬೆ ಗಾತ್ರ
* ಬೆಲ್ಲ – ಚಿಕ್ಕ ತುಂಡು (ಐಚ್ಛಿಕ)
* ಜೀರಿಗೆ – 1 ಚಮಚ
* ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು:
* ಎಣ್ಣೆ – 2 ಚಮಚ
* ಸಾಸಿವೆ – 1/2 ಚಮಚ
* ಜೀರಿಗೆ – 1/2 ಚಮಚ
* ಉದ್ದಿನ ಬೇಳೆ – 1 ಚಮಚ
* ಕಡಲೆಬೇಳೆ – 1 ಚಮಚ
* ಕರಿಬೇವಿನ ಎಲೆಗಳು – 5 ರಿಂದ 6
ಮಾಡುವ ವಿಧಾನ:
* ಮೊದಲಿಗೆ, ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಅದಕ್ಕೆ ಒಣ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಹುರಿಯಿರಿ. ಮೆಣಸಿನಕಾಯಿ ಸ್ವಲ್ಪ ಗರಿಗರಿಯಾದ ನಂತರ, ಅವುಗಳನ್ನು ತೆಗೆದು ಪಕ್ಕಕ್ಕೆ ಇಡಿ.
* ಅದೇ ಬಾಣಲೆಗೆ, ತುರಿದಿಟ್ಟುಕೊಂಡ ಮೂಲಂಗಿ ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
* ಮಿಕ್ಸಿ ಜಾರ್‌ಗೆ ಹುರಿದ ಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆಹಣ್ಣು, ಜೀರಿಗೆ, ಉಪ್ಪು ಮತ್ತು ಬೆಲ್ಲ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಿ.
* ನಂತರ, ಹುರಿದ ಮೂಲಂಗಿಯನ್ನು ಸೇರಿಸಿ, ನೀರು ಹಾಕದೆ ಗಟ್ಟಿಯಾಗಿ ರುಬ್ಬಿಕೊಳ್ಳಿ.
* ಈಗ, ಒಂದು ಸಣ್ಣ ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ, ಸಾಸಿವೆ ಹಾಕಿ ಸಿಡಿಸಿ. ನಂತರ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
* ಈ ಒಗ್ಗರಣೆಯನ್ನು ರುಬ್ಬಿಕೊಂಡ ಚಟ್ನಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಯಾದ ಮೂಲಂಗಿ ಚಟ್ನಿ ಸವಿಯಲು ಸಿದ್ಧ.
ಈ ಚಟ್ನಿ ರೊಟ್ಟಿ, ದೋಸೆ ಮತ್ತು ಅನ್ನದ ಜೊತೆ ತುಂಬಾ ಚೆನ್ನಾಗಿರುತ್ತದೆ. ಮಳೆಗಾಲದ ಚಳಿಗೆ ಇದು ಬೆಚ್ಚನೆಯ ರುಚಿ ನೀಡುತ್ತದೆ. ಒಮ್ಮೆ ಮಾಡಿ ನೋಡಿ.








