ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಗೆ ಕಡಿವಾಣ ಹಾಕಲು ಇಂದು ರಾತ್ರಿಯಿಂದ ಒಂದು ವಾರಗಳ ಕಾಲ ಲಾಕ್ಡೌನ್ ಆಗಲಿದೆ.
ರಾತ್ರಿ 8ಗಂಟೆಯಿಂದಲೇ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಲಾಕ್ಡೌನ್ ಆಗಲಿದೆ. ಹೀಗಾಗಿ ಸಂಜೆಯಾಗುತ್ತಿದ್ದಂತೆ ವಾಹನ ಸಂಚಾರ ಬಂದ್ ಆಗಲಿದೆ.
ರಾಜ್ಯ ಸರ್ಕಾರ ಕೇವಲ ಒಂದು ವಾರ ಮಾತ್ರ ಲಾಕ್ಡೌನ್ ಮಾಡುವುದಾಗಿ ಹೇಳಿದ್ದರೂ ಜನರಿಗೆ ನಂಬಿಕೆ ಇಲ್ಲ. ಕಳೆದ ಮಾರ್ಚ್ನಲ್ಲಿ ಲಾಕ್ಡೌನ್ ಮಾಡಿದಾಗ ಕೇವಲ 21 ದಿನ ಎಂದು ಹೇಳಿ ಎರಡು ತಿಂಗಳವರೆಗೆ ವಿಸ್ತರಣೆ ಮಾಡಲಾಗಿತ್ತು. ಹೀಗಾಗಿ ಸಾವಿರಾರು ಜನರು ಹುಟ್ಟೂರುಗಳತ್ತ ಗಂಟು-ಮೂಟೆ ಕಟ್ಟಿಕೊಂಡು ಹೊರಟಿದ್ದಾರೆ. ನಿನ್ನೆಯಂದಲೇ ಸಾವಿರಾರು ಮಂದಿ ಊರುಗಳತ್ತ ಹೊರಟಿದ್ದಾರೆ. ನಿನ್ನೆ ಹೋಗಲಾರದವರು ಇಂದು ಹುಟ್ಟೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಹೀಗಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ ತುಂಬಿ ತುಳುಕುತ್ತಿದೆ. ಸಾಮಾಜಿಕ ಅಂತರ ಕಾಪಾಡಲು ಒಂದು ಬಸ್ನಲ್ಲಿ ಕೇವಲ 30 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶ ಇದೆ. ಹೀಗಾಗಿ ಬಸ್ಗಳಿಗೆ ಜನರು ಪರದಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಸ್ವಂತ ವಾಹನಗಳಾದ ಕಾರು, ಬೈಕ್, ಲಗೇಜ್ ಆಟೋ, ಟೆಂಪೋ, ಟ್ರ್ಯಾಕ್ಟರ್ಗಳಲ್ಲಿ ತೆರಳುತ್ತಿದ್ದು, ನೆಲಮಂಗಲದ ಟೋಲ್ ಬಳಿ ಇಂದೂ ಕೂಡ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.








