ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರ ಕುಟುಂಬದ ವಿರುದ್ಧ ಅವರ ಸೊಸೆ ಪವಿತ್ರಾ ಅವರು ಗಂಭೀರ ವರದಕ್ಷಿಣೆ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಸ್. ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಮತ್ತು ಪುತ್ರ ಪವನ್ ವಿರುದ್ಧ ವರದಕ್ಷಿಣೆಗಾಗಿ ಕಿರುಕುಳ ನೀಡಿದ ಆರೋಪ ಹೊರಿಸಲಾಗಿದೆ.
ಪವಿತ್ರಾ ಅವರ ಆರೋಪದ ಪ್ರಕಾರ, ಕಳೆದ ಒಂದು ವರ್ಷದಿಂದ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಈ ಅವಧಿಯಲ್ಲಿಯೂ ವರದಕ್ಷಿಣೆಗಾಗಿ ಬೇಡಿಕೆ ಮುಂದುವರಿದಿದೆ. ತಮ್ಮ ಕುಟುಂಬದಿಂದ ಹಲವಾರು ಬಾರಿ ಹಣವನ್ನು ತಂದುಕೊಟ್ಟರೂ, ಪದೇಪದೇ ಹಣದ ಬೇಡಿಕೆ ಇಡುತ್ತಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಗಂಭೀರ ಆರೋಪಗಳ ಬಳಿಕ, ಎಸ್. ನಾರಾಯಣ್ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ತಮ್ಮ ಕುಟುಂಬದ ಸಂಪ್ರದಾಯದಲ್ಲಿ ವರದಕ್ಷಿಣೆ ಪಿಡುಗು ಇಲ್ಲ ಎಂದು ಸ್ಪಷ್ಟಪಡಿಸಿದ ನಾರಾಯಣ್, ತಮ್ಮ ತಂದೆ 60ರ ದಶಕದಲ್ಲಿ ವರದಕ್ಷಿಣೆ ವಿರುದ್ಧ ದೊಡ್ಡ ಅಭಿಯಾನ ನಡೆಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ತಾವು ಕೂಡ ತಮ್ಮ ಸಿನಿಮಾಗಳ ಮೂಲಕ ಈ ಪಿಡುಗನ್ನು ತೊಲಗಿಸಲು ಪ್ರಯತ್ನಿಸಿದವರು ಎಂದು ತಿಳಿಸಿದ್ದಾರೆ. “ಅವರು ಮನೆ ಬಿಟ್ಟು ಹೋಗಿ 14 ತಿಂಗಳಾಗಿದ್ದು, ನಾವು ನಿಜವಾಗಿಯೂ ಕಿರುಕುಳ ನೀಡಿದ್ದರೆ ಅವರು ಅಂದೇ ದೂರು ನೀಡಬೇಕಿತ್ತು, ಆಗ ಯಾಕೆ ನಿದ್ದೆ ಮಾಡುತ್ತಿದ್ದರು?” ಎಂದು ಅವರು ಪ್ರಶ್ನಿಸಿದ್ದಾರೆ.
ಈ ಪ್ರಕರಣವು ಈಗ ನ್ಯಾಯಾಲಯದಲ್ಲಿದ್ದು, “ಇದು ಬಗೆಹರಿಸುವಂತಹ ವಿಷಯವಲ್ಲ. ವಿಷ ಕುಡಿದಿದ್ದರೆ ಆಸ್ಪತ್ರೆಗೆ ಸೇರಿಸಿ ವಿಷ ಕಕ್ಕಿಸಬಹುದು, ನೇಣು ಹಾಕಿಕೊಂಡರೆ ಏನು ಮಾಡುವುದು? ಆ ರೀತಿಯ ಪರಿಸ್ಥಿತಿಯಿದು” ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳು ಇಂತಹ ಕೇಸುಗಳನ್ನು ‘ಅಸ್ತ್ರ’ದಂತೆ ಬಳಸುತ್ತಿದ್ದಾರೆ ಎಂದು ಹೇಳಿದ ನಾರಾಯಣ್, ನ್ಯಾಯಾಲಯದಲ್ಲಿ ಸತ್ಯ ಹೊರಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದು, ಕುಟುಂಬದ ಸಂಸ್ಕಾರವನ್ನು ಅರಿಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.








