ಬೆಂಗಳೂರಿನ ಅಪೋಲೋ ಮತ್ತು ವಿಕ್ರಂ ಆಸ್ಪತ್ರೆಗಳ ಒಪಿಡಿ ಸ್ಥಗಿತ
ಬೆಂಗಳೂರು, ಜುಲೈ 14: ಜಯನಗರದ ಅಪೋಲೋ ಆಸ್ಪತ್ರೆ ಶಾಖೆ ಮತ್ತು ವಸಂತ ನಗರದಲ್ಲಿರುವ ವಿಕ್ರಂ ಆಸ್ಪತ್ರೆಗಳ ಒಪಿಡಿಯನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಈ ಆಸ್ಪತ್ರೆಗಳು ನಿರಾಕರಿಸಿದ ಕಾರಣ ಈ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ವಸಂತ ನಗರದಲ್ಲಿರುವ ಪ್ರತಿಷ್ಟಿತ ವಿಕ್ರಂ ಆಸ್ಪತ್ರೆ ಹಾಗೂ ಜಯನಗರದಲ್ಲಿರುವ ಅಪೊಲೋ ಸ್ಪೆಷಾಲಿಟಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಸರ್ಕಾರ ನಿಗದಿ ಮಾಡಿದ ಶೇ 50 ರಷ್ಟು ಬೆಡ್ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ಆಸ್ಪತ್ರೆಗಳ ಒಪಿಡಿಯನ್ನು ಸ್ಥಗಿತ ಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಆದ ಮಾತುಕತೆ ಪ್ರಕಾರ ಸರ್ಕಾರಕ್ಕೆ ಶೇ 50ರಷ್ಟು ಬೆಡ್ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿದ್ದವು. ಆದರೆ ಈ ಎರಡೂ ಆಸ್ಪತ್ರೆಗಳು ಇದುವರೆಗೂ ತಮ್ಮಲ್ಲಿರುವ ಬೆಡ್ ಗಳ ಮಾಹಿತಿ, ಕೋವಿಡ್ ಸೋಂಕಿತರನ್ನು ದಾಖಲಿಸಿಕೊಂಡಿರುವ ವಿಷಯ,ಇಂತಿಷ್ಟು ಬೆಡ್ ಗಳನ್ನು ನೀಡುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ನಿನ್ನೆ ಜಿಲ್ಲಾಧಿಕಾರಿಗಳು ಈ ಎರಡು ಖಾಸಗಿ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದು, ನೋಟಿಸ್ ಗೆ ಉತ್ತರ ಕೊಡದ ಹಿನ್ನೆಲೆಯಲ್ಲಿ ಒಪಿಡಿ ಬಂದ್ ಮಾಡಲು ಸೂಚನೆ ನೀಡಲಾಗಿದೆ.








