ನವದೆಹಲಿ: “ಬೆಂಗಳೂರಿನ ಹವಾನಿಯಂತ್ರಿತ (ಎಸಿ) ಕೊಠಡಿಗಳಲ್ಲಿ ಕುಳಿತು ಕಾಲಹರಣ ಮಾಡುವುದನ್ನು ಬಿಟ್ಟು, ಮೊದಲು ನೆರೆ ಸಂತ್ರಸ್ತರ ಕಣ್ಣೀರು ಒರೆಸಲು ಜನರ ಬಳಿ ಹೋಗಿ. ಈ ಸೋಮಾರಿತನ ಮುಂದುವರೆಸಿದರೆ ರಾಜ್ಯದ ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ನೆರೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ‘ಕುಂಭಕರ್ಣ ನಿದ್ರೆ’ಗೆ ಜಾರಿದೆ ಎಂದು ಆರೋಪಿಸಿದ ಅವರು, ತಕ್ಷಣವೇ ನೆರೆ ಸಂತ್ರಸ್ತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದರು.
ನವದೆಹಲಿಯಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಕಟು ಶಬ್ದಗಳಲ್ಲಿ ಟೀಕಿಸಿದರು.
ಕುಂಭಕರ್ಣ ನಿದ್ರೆಯಲ್ಲಿರುವ ಸರ್ಕಾರ
“ಕಲ್ಯಾಣ ಕರ್ನಾಟಕದಲ್ಲಿ ಜನರು ನೆರೆ ಹಾವಳಿಯಿಂದ ತತ್ತರಿಸುತ್ತಿದ್ದರೆ, ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ 36 ಸಚಿವರು ಏನು ಮಾಡುತ್ತಿದ್ದರು? ಕಳೆದ ಮೂರು ತಿಂಗಳಿಂದ ಈ ಸರ್ಕಾರ ಗಾಢ ನಿದ್ರೆಯಲ್ಲಿತ್ತು. ಮಾಧ್ಯಮಗಳು ಮತ್ತು ಪ್ರತಿಪಕ್ಷಗಳು ಸರ್ಕಾರದ ನಿಷ್ಕ್ರಿಯತೆಯನ್ನು ಪ್ರಶ್ನಿಸಿದ ನಂತರವೇ ಮುಖ್ಯಮಂತ್ರಿಗಳಿಗೆ ಜ್ಞಾನೋದಯವಾಗಿ ವೈಮಾನಿಕ ಸಮೀಕ್ಷೆಯ ನಾಟಕವಾಡಿದ್ದಾರೆ,” ಎಂದು ಕುಮಾರಸ್ವಾಮಿ ಕಿಡಿಕಾರಿದರು. “ನೆರೆ ಪ್ರತಿ ವರ್ಷ ಬರುವ ಸಮಸ್ಯೆಯಾಗಿದ್ದರೂ, ಅದನ್ನು ಎದುರಿಸಲು ಸರ್ಕಾರ ಯಾವುದೇ ಪೂರ್ವಸಿದ್ಧತೆ ಮಾಡಿಕೊಂಡಿಲ್ಲ. ಇದು ಸರ್ಕಾರದ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ,” ಎಂದರು.
ನೆರೆ ಪರಿಹಾರದ ಬಗ್ಗೆ ಪ್ರಶ್ನಿಸುವ ಪ್ರತಿಪಕ್ಷಗಳ ವಿರುದ್ಧ ಮುಖ್ಯಮಂತ್ರಿಗಳು ನೀಡುತ್ತಿರುವ ಉತ್ತರಗಳನ್ನು ಗಮನಿಸಿದರೆ ತೀವ್ರ ನಿರಾಸೆಯಾಗುತ್ತದೆ. “ಪ್ರತಿಪಕ್ಷಗಳನ್ನು ಬೈದರೆ ಜನರ ಕಷ್ಟಗಳು ದೂರವಾಗುತ್ತವೆಯೇ? ಅವರು ಅಲಂಕರಿಸಿರುವ ಉನ್ನತ ಹುದ್ದೆಗೆ ಅವರ ಮಾತುಗಳು ಶೋಭೆ ತರುವುದಿಲ್ಲ. ಸಂಪುಟದಲ್ಲಿರುವ 36 ಸಚಿವರೂ ಸಹ ಜನರ ಕಷ್ಟಗಳಿಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಕೆಶಿ ಜೈಲಿಗೆ ಹೋಗುವುದು ನಿಶ್ಚಿತ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧವೂ ನೇರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, “ನೀವು ಯಾವ ರೀತಿ ಆಟ ಆಡುತ್ತಿದ್ದೀರಾ ಎನ್ನುವುದು ಎಲ್ಲರಿಗೂ ತಿಳಿದಿದೆ. ಎಲ್ಲದಕ್ಕೂ ದೇವರು ತಕ್ಕ ಉತ್ತರ ಕೊಟ್ಟೇ ಕೊಡುತ್ತಾನೆ. ನೀವು ಮತ್ತೆ ಜೈಲಿಗೆ ಹೋಗುವ ದಿನಗಳು ದೂರವಿಲ್ಲ,” ಎಂದು ಭವಿಷ್ಯ ನುಡಿದರು.
“ಬಿಡದಿ ಟೌನ್ಶಿಪ್ ವಿಚಾರದಲ್ಲಿ ನಮ್ಮ ಮೇಲೆ ಆಧಾರರಹಿತ ಆರೋಪ ಮಾಡುವ ಅವರು, ಮೊದಲು ತಮ್ಮ ಕೃತ್ಯಗಳನ್ನು ನೋಡಿಕೊಳ್ಳಲಿ. ಬಿಲ್ಲುಕೆಂಪನಹಳ್ಳಿಯಲ್ಲಿ ಅಮಾಯಕ ವ್ಯಕ್ತಿಯ ಭೂಮಿಯನ್ನು ಲಪಟಾಯಿಸಿ ಬೃಹತ್ ಕಟ್ಟಡ ಕಟ್ಟಿಕೊಂಡಿದ್ದಾರೆ. ಅಷ್ಟೇ ಅಲ್ಲ, ದೇಶ ಕಾಯುವ ನಿವೃತ್ತ ಯೋಧನ ಜಮೀನನ್ನೂ ಕಬಳಿಸಿದ್ದಾರೆ. ಇಂತಹವರಿಗೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ನಮ್ಮ ಕುಟುಂಬದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ,” ಎಂದು ಗುಡುಗಿದರು.








