ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಿದ್ಧಾಂತದ ವಿರುದ್ಧ ವಿದೇಶಿ ನೆಲದಲ್ಲಿ ಮತ್ತೊಮ್ಮೆ ಗುಡುಗಿದ್ದು, ಅವರ ಸೈದ್ಧಾಂತಿಕತೆಯ ಮೂಲವೇ ಹೇಡಿತನದಿಂದ ಕೂಡಿದೆ ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರನ್ನು ಉದ್ದೇಶಿಸಿ ಮಾತನಾಡಿದ ಅವರು, ಚೀನಾ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ಮತ್ತು ಸಾವರ್ಕರ್ ಅವರ ಬರಹಗಳನ್ನು ಉಲ್ಲೇಖಿಸಿ ತಮ್ಮ ವಾದವನ್ನು ಸಮರ್ಥಿಸಿಕೊಂಡರು.
ಜೈಶಂಕರ್ ಹೇಳಿಕೆಯೇ ಇದಕ್ಕೆ ಸಾಕ್ಷಿ
ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಈ ಹಿಂದೆ ಚೀನಾ ಕುರಿತು ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, “ಚೀನಾ ನಮ್ಮಗಿಂತ ಆರ್ಥಿಕವಾಗಿ ದೊಡ್ಡದು, ನಾವು ಅವರೊಂದಿಗೆ ಹೇಗೆ ಹೋರಾಡಲು ಸಾಧ್ಯ?” ಎಂಬ ವಿದೇಶಾಂಗ ಸಚಿವರ ಮಾತು ಬಿಜೆಪಿ-ಆರೆಸ್ಸೆಸ್ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.
“ತಮಗಿಂತ ಬಲಿಷ್ಠರ ಮುಂದೆ ತಲೆಬಾಗುವುದು ಮತ್ತು ತಮಗಿಂತ ದುರ್ಬಲರ ಮೇಲೆ ದಬ್ಬಾಳಿಕೆ ಮಾಡುವುದೇ ಅವರ ಸಿದ್ಧಾಂತ. ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದ್ದರೂ, ‘ಅವರು ನಮಗಿಂತ ಶಕ್ತಿಶಾಲಿಗಳು, ನಾವು ಹೋರಾಡಲು ಸಾಧ್ಯವಿಲ್ಲ’ ಎಂದು ಹೇಳುವುದು ಅವರ ಸೈದ್ಧಾಂತಿಕತೆಯ ಹೃದಯಭಾಗದಲ್ಲಿರುವ ಹೇಡಿತನವನ್ನು ಸ್ಪಷ್ಟವಾಗಿ ತೋರಿಸುತ್ತದೆ,” ಎಂದು ರಾಹುಲ್ ಕಿಡಿಕಾರಿದರು.
ಸಾವರ್ಕರ್ ಪುಸ್ತಕದ ಪ್ರಸಂಗ ಉಲ್ಲೇಖ
ತಮ್ಮ ವಾದವನ್ನು ಮತ್ತಷ್ಟು ಸಮರ್ಥಿಸಿಕೊಳ್ಳಲು ರಾಹುಲ್ ಗಾಂಧಿ, ವಿನಾಯಕ್ ದಾಮೋದರ್ ಸಾವರ್ಕರ್ ಅವರ ಪುಸ್ತಕದಲ್ಲಿದ್ದ ಒಂದು ಘಟನೆಯನ್ನು ಉಲ್ಲೇಖಿಸಿದರು. “ಸಾವರ್ಕರ್ ತಮ್ಮ ಪುಸ್ತಕದಲ್ಲಿ, ತಾವೂ ಸೇರಿದಂತೆ ಐವರು ಸ್ನೇಹಿತರು ಸೇರಿ ಒಬ್ಬ ಮುಸ್ಲಿಂ ವ್ಯಕ್ತಿಗೆ ಮನಬಂದಂತೆ ಥಳಿಸಿ, ನಂತರ ಬಹಳ ಖುಷಿಪಟ್ಟಿದ್ದಾಗಿ ಬರೆದುಕೊಂಡಿದ್ದಾರೆ. ಐದು ಜನರು ಸೇರಿ ಒಬ್ಬ ದುರ್ಬಲ ವ್ಯಕ್ತಿಗೆ ಹೊಡೆದು ಸಂಭ್ರಮಿಸುವುದು ಶೌರ್ಯವಲ್ಲ, ಅದು ಶುದ್ಧ ಹೇಡಿತನ. ಇದೇ ಆರೆಸ್ಸೆಸ್ ನ ಮೂಲ ಸಿದ್ಧಾಂತ,” ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಈ ಹೇಳಿಕೆಗಳು ಭಾರತೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ರಾಹುಲ್ ಗಾಂಧಿಯವರ ವಿದೇಶಿ ಪ್ರವಾಸದ ಭಾಷಣಗಳು ಮತ್ತೊಮ್ಮೆ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿವೆ.







