ರೈಲ್ವೆ ಬೋಗಿಗಳನ್ನು ಐಸೋಲೇಶನ್ ವಾರ್ಡ್’ಗಳನ್ನಾಗಿಸುವ ಯೋಚನೆ ಪ್ರಧಾನಿಯವರದ್ದು – ಪಿಯುಷ್ ಗೋಯೆಲ್
ಹೊಸದಿಲ್ಲಿ, ಜುಲೈ 15: ಮಾರ್ಚ್ ನಲ್ಲಿ ಕೊವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಭಾರತೀಯ ರೈಲ್ವೆಯ ಬೋಗಿಗಳನ್ನು ಐಸೋಲೇಶನ್ ವಾರ್ಡ್ಗಳನ್ನಾಗಿ ಮಾಡಲಾಗಿತ್ತು. ಭಾರತೀಯ ರೈಲ್ವೆಯ ಒಟ್ಟು 17 ವಲಯಗಳಿಂದಲೂ ತಲಾ 10 ಬೋಗಿಗಳನ್ನು ಐಸೋಲೇಶನ್ ವಾರ್ಡ್ ಗಳನ್ನಾಗಿ ಮಾಡಿ ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿತ್ತು. ಹಾಗೆಯೇ ಈ ಚಿಂತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ರೈಲ್ವೆ ಬೋಗಿಗಳನ್ನು ಐಸೋಲೇಶನ್ ವಾರ್ಡ್ ಆಗಿ ಮಾಡಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಪ್ರಧಾನಿ ನರೇಂದ್ರ ಮೋದಿಯವರ ಯೋಚನೆಯಾಗಿತ್ತು ಎಂದು ರೈಲ್ವೆ ಸಚಿವ ಪಿಯುಷ್ ಗೋಯೆಲ್ ತಿಳಿಸಿದ್ದಾರೆ.
ಲಾಕ್ ಡೌನ್ ಜಾರಿಗೂ ಮೊದಲೇ ಪ್ರಧಾನಿ ಮೋದಿ ಈ ವಿಚಾರವನ್ನು ನನ್ನ ಮುಂದೆ ಇಟ್ಟಿದ್ದರು ಎಂದು ಪಿಯುಷ್ ಗೋಯೆಲ್ ಹೇಳಿದ್ದಾರೆ.

ಲಾಕ್ ಡೌನ್ ಜಾರಿಗೂ ಮೊದಲೇ ಒಂದು ದಿನ ಪ್ರಧಾನಿ ಮೋದಿ ನನ್ನನ್ನು ಕರೆದು, ರೈಲ್ವೆ ಬೋಗಿಗಳನ್ನು ಕೊವಿಡ್-19 ಸೋಂಕಿತರಿಗಾಗಿ ಐಸೋಲೇಶನ್ ವಾರ್ಡ್ಗಳಾಗಿ ಪರಿವರ್ತಿಸಲು ಸಾಧ್ಯವೇ ಎಂದು ಕೇಳಿದರು.
ನನಗೆ ಎಂದೂ ಇಂತಹ ಚಿಂತನೆಯೊಂದು ಹೊಳೆದಿರಲಿಲ್ಲ. ನಿಜವಾಗಿಯೂ ಮೋದಿಯವರ ಈ ಯೋಚನೆ ಹೊಸತನದಿಂದ ಕೂಡಿತ್ತು, ನಾನದಕ್ಕೆ ಒಪ್ಪಿಗೆ ಸೂಚಿಸಿದೆ . ಹಾಗೇ ಐಸೋಲೇಶನ್ ವಾರ್ಡ್ ಆಗಿ ಪರಿವರ್ತನೆ ಮಾಡಲು ರೈಲ್ವೆ ಇಲಾಖೆ ಉದ್ಯೋಗಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸೇರಿ ಕಠಿಣ ಶ್ರಮ ವಹಿಸಿದ್ದಾರೆ ಎಂದು ಪಿಯುಷ್ ಗೋಯೆಲ್ ತಿಳಿಸಿದ್ದಾರೆ.

ಪ್ರಸ್ತುತ ಸುಮಾರು 80,000 ಐಸೋಲೇಶನ್ ಬೆಡ್ ಗಳನ್ನು ರೈಲ್ವೆ ಇಲಾಖೆಯು 5000 ರೈಲ್ವೆ ಕೋಚ್ ನಿಂದ ತಯಾರು ಮಾಡಿದೆ ಎಂದು ಪಿಯುಷ್ ಗೋಯೆಲ್ ತಿಳಿಸಿದ್ದು, ಕೊರೊನಾ ವೈರಸ್ ಸಂದರ್ಭದಲ್ಲಿ ಯಾವುದೇ ರೈಲ್ವೆ ಇಲಾಖೆ ಉದ್ಯೋಗಿಗಳು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳದೆ ಅವಿರತವಾಗಿ ದುಡಿದಿದ್ದಾರೆ ಎಂದು ಹೇಳಿದರು.
ಸುಮಾರು 63 ಲಕ್ಷ ವಲಸೆ ಕಾರ್ಮಿಕರನ್ನು 4611 ಶ್ರಮಿಕ್ ವಿಶೇಷ ರೈಲುಗಳ ಮೂಲಕ ಅವರ ಊರುಗಳಿಗೆ ತಲುಪಿಸಲಾಗಿದೆ ಎಂದು ಹೇಳಿದ ರೈಲ್ವೆ ಸಚಿವರು ಶ್ರಮಿಕ್ ರೈಲಿನಲ್ಲಿ ಪ್ರಯಾಣ ಮಾಡಿದ ವಲಸೆ ಕಾರ್ಮಿಕರಿಗೆ ಊಟ, ತಿಂಡಿ, ನೀರಿನ ವ್ಯವಸ್ಥೆಯನ್ನು ರೈಲ್ವೆ ಇಲಾಖೆಯಿಂದ ಮಾಡಲಾಗಿದೆ ಎಂದು ಹೇಳಿದರು.








