ಇದು ಪರಿಸ್ಥಿತಿಯ ಕೈಗೊಂಬೆಯಾಗಿ ಎರಡು ಕವಲಾದ ಒಂದು ಆತ್ಮದ ಕಥೆ. ಈ ಆತ್ಮ ಎಂದೂ ಎಂದೆಂದೂ ಒಂದೇ ಕಡೆ ಬಂಧಿಯಾಗಿರಲಿಲ್ಲ. ಒಬ್ಬರ ದೇಹ ಬಿಟ್ಟಾದ ನಂತರ ಇನ್ನೊಬ್ಬರ ದೇಹ ಸೇರಿ ನೆಮ್ಮದಿಯಾಗಿಯೇ ತಿರುಗಾಡಿಕೊಂಡು ಇರುತ್ತಿತ್ತು. ಅದು ಎಷ್ಟು ಕಾಲ? ಸರಿ ಸುಮಾರು ಸಾವಿರ ವರ್ಷಕ್ಕೂ ಮೀರಿ. ಯಾರೇ ಬಲಿಷ್ಠರು, ಶಕ್ತಿವಂತರು ಕಂಡರೂ, ಅಂತವರ ದೇಹ ಸೇರಿ ತನ್ನ ಕಾರುಬಾರು ನಡೆಸುತ್ತಿತ್ತು. ಈ ಆತ್ಮ ಆಳಿದ್ದು ಅಂತಿಂಥ ದೇಶವನ್ನಲ್ಲ; ಅಖಂಡ ಭರತ ಖಂಡ ಎಂಬ ಸಾರ್ವಭೌಮ ನೆಲವನ್ನು.
ಈ ಆತ್ಮ ತನ್ನ ಆಳ್ವಿಕೆಯ ಕಾಲದಲ್ಲಿ ನಿರಾತಂಕವಾಗಿ ಒಡ್ಡೋಲಗ ನಡೆಸುತ್ತಿದ್ದ ಸಂದರ್ಭದಲ್ಲಿ ಎಷ್ಟು ರಕ್ತ ಕುಡಿದಿದೆಯೋ? ಎಷ್ಟು ದರ್ಪ ದಬ್ಬಾಳಿಕೆ ನಡೆಸಿದೆಯೋ? ಅಮಾನುಷವಾಗಿ ಅದೆಷ್ಟು ದಾಷ್ಟ್ರ್ಯದಿಂದ ವರ್ತಿಸಿದೆಯೋ? ಎಲ್ಲದಕ್ಕೂ ಇತಿಹಾಸವೇ ಸಾಕ್ಷಿ. ಇನ್ನು, ಈ ಆತ್ಮ ಅದೆಷ್ಟು ಚಕ್ರವರ್ತಿ, ಸಾಮ್ರಾಟರ ದೇಹ ಸೇರಿಕೊಂಡು ದರ್ಬಾರು ನಡೆಸಿದೆ ಅನ್ನುವುದು ಸುಲಭದಲ್ಲಿ ಲೆಕ್ಕಕ್ಕೆ ಸಿಗಲ್ಲ. ಯಾಕಂದ್ರೆ ಈ ಆತ್ಮಕ್ಕೆ ಸಾವೇ ಇಲ್ಲ. ಪುನರಪಿ ಜನನಂ.. ಪುನರಪಿ ಮರಣಂ.. ದೇಹ ನಾಶವಾದ್ರೂ ಆತ್ಮ ಅವಿನಾಶಿ. ಹಾಗೇ ಈ ಆತ್ಮ ಕೂಡ. ಈ ಆತ್ಮಕ್ಕೆ ಜಾತಿ – ಧರ್ಮದ ಹಂಗಿಲ್ಲ. ಎಲ್ಲಾ ಧರ್ಮ – ಜಾತಿಗಳ ಮನುಷ್ಯರ ದೇಹ ಸೇರಿಕೊಂಡು ಎಲ್ಲವನ್ನೂ ಅನುಭವಿಸಿದೆ.
ಆದ್ರೆ ಜನ್ಮ ಜನ್ಮಾಂತರದ ಪಾಪ-ಕರ್ಮದ ಫಲವೋ ಏನೋ..? ಪರಕೀಯರ ಕೈಯಲ್ಲಿ ಬಂಧಿಯಾಗುವ ಸೂಚನೆ ಸಿಕ್ಕಿದ್ರೂ ಅದನ್ನು ಎದುರಿಸಬಲ್ಲ ದೇಹ ಈ ಆತ್ಮಕ್ಕೆ ಸಿಗಲಿಲ್ಲ. ಸಮುದ್ರಯಾನದ ಮೂಲಕ ವ್ಯಾಪಾರಕ್ಕೆ ಬಂದವರು ಈ ಆತ್ಮವನ್ನು ಸಂಪೂರ್ಣವಾಗಿ ಪರವಶ ಮಾಡಿಕೊಂಡ್ರು. ನೋಡನೋಡುತ್ತಲೇ ಈ ಆತ್ಮವನ್ನು ಬಂಧನದೊಳಗೆ ಸಿಲುಕಿಸಿದ್ರು. ಇನೂರು ವರ್ಷ ಈ ಆತ್ಮದೊಳಗಿದ್ದ ಸಿರಿತನವನ್ನು ದೋಚಿಕೊಂಡು ಹೋದ್ರು. ನಂತರದ 90 ವರ್ಷ ಈ ಆತ್ಮಕ್ಕೆ ಕೊಡಬಾರದ ಕಷ್ಟ ಕೊಟ್ಟು, ಹಿಂಸೆ ನೀಡಿದ್ರು. ಸಾವಿರಾರು ವರ್ಷ ಯಾರ ಹಂಗಿಲ್ಲದೆ ರಾಜ್ಯಭಾರ ನಡೆಸಿದ್ದ ಈ ಆತ್ಮ ಗುಲಾಮನಂತೆ ಇರಬೇಕಾಯ್ತು. ಪರಕೀಯರ ಕೈಯಿಂದ ಮುಕ್ತಿ ಪಡೆಯಲು ಈ ಆತ್ಮದ ಜೊತೆಗೆ ಕೋಟ್ಯಂತರ ದೇಹಗಳು ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂತು. ಲಕ್ಷಾಂತರ ಮಂದಿ ಈ ಆತ್ಮದ ವಿಮೂಚನೆಗಾಗಿ ತ್ಯಾಗ ಬಲಿದಾನಗೈದರು. ಆದ್ರೂ ಪರದೇಸಿಗಳ ಕೈಗೆ ಸಿಕ್ಕಿ ನರಳಾಡುತ್ತಿದ್ದ ಈ ಆತ್ಮ ಎಂದೆಂದಿಗೂ ಧೈರ್ಯ ಕಳೆದುಕೊಳ್ಳಲಿಲ್ಲ. ಯಾಕಂದ್ರೆ ಈ ಆತ್ಮಕ್ಕೆ ಗೊತ್ತಿತ್ತು. ಇಂದಲ್ಲ ನಾಳೆಯಾದ್ರೂ ಈ ಬಂಧನದಿಂದ ಮುಕ್ತಿ ಸಿಕ್ಕೇ ಸಿಗುತ್ತೆ ಅನ್ನೋ ಬಲವಾದ ನಂಬಿಕೆ ಇತ್ತು.
ಅಷ್ಟಕ್ಕೂ ಈ ಆತ್ಮ ಯಾವುದು ಗೊತ್ತಾ..? ಅದುವೇ ಭಾರತಾಂಬೆಯ ಆತ್ಮ.. ಈ ಆತ್ಮವನ್ನು ಬಂಧಿಸಿದವರು ಯಾರು ಗೊತ್ತಾ..? ಅವರೇ ಬ್ರಿಟಿಷರು..! 1608ರಲ್ಲಿ ಸೂರತ್‍ಗೆ ಬಂದಿದ್ದ ಬ್ರಿಟಿಷ್ ವ್ಯಾಪಾರಿಗಳು 49 ವರ್ಷ ವ್ಯಾಪಾರ ಮಾಡಿದ್ರು. 1657ರಿಂದ 1857ರ ತನಕ ಈಸ್ಟ್ ಇಂಡಿಯಾ ಕಂಪೆನಿ ಮೂಲಕ ಭಾರತದ ಸಂಪತ್ತನ್ನು ಲೂಟಿ ಮಾಡಿದ್ರು. 1857ರಿಂದ 1947ರ ತನಕ ಭಾರತವನ್ನು ಬ್ರಿಟಿಷ್ ಇಂಡಿಯಾ ಹೆಸರಿನಲ್ಲಿ ರಾಜ್ಯಭಾರ ಮಾಡಿದ್ರು.
ಈ ಬಂಧನದಿಂದ ಮುಕ್ತಿ ಪಡೆಯಲು ಅಖಂಡ ಭಾರತ ಜಾತಿ – ಧರ್ಮ, ಮತ ಭೇದವಿಲ್ಲದೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ರು. ಕೆಲವು ರಾಜ ಮನೆತನದವರು ಬ್ರಿಟಿಷರ ಜೊತೆ ಸ್ನೇಹ ಸಂಬಂಧ ಹೊಂದಿದ್ದು ಬೇರೆ ವಿಚಾರ. ಆದ್ರೆ ಇಂಗ್ಲೀಷರ ಸಂಕೋಲೆಯಲ್ಲಿ ಬಂಧಿಯಾಗಿದ್ದ ಭಾರತಾಂಬೆಯ ಆತ್ಮಕ್ಕೆ ಮುಕ್ತಿ ನೀಡಲು ಆರಂಭದಲ್ಲಿ ಹಿಂಸೆಯ ಸಿದ್ಧಾಂತವನ್ನು ಪ್ರತಿಪಾದಿಸಿದ್ರೂ ಅದು ಪ್ರಯೋಜನವಾಗಲಿಲ್ಲ. ನಂತರ ಗಾಂಧೀಜಿಯ ಅಹಿಂಸಾತ್ಮಕ, ರಚನಾತ್ಮಕ, ಹೋರಾಟಕ್ಕೆ ಬ್ರಿಟಿಷರು ಕೊನೆಗೂ ಮಣಿದು ಭಾರತಾಂಬೆಯ ಆತ್ಮಕ್ಕೆ ಮುಕ್ತಿ ನೀಡಿದ್ರು ಎಂಬುದು ಈಗ ಇತಿಹಾಸ. ಪರಕೀಯರ ಬಂಧನದಿಂದ ಮುಕ್ತಿ ಪಡೆಯಲು ಭಾರತಾಂಬೆಯ ಆತ್ಮ ಹಿಂಸೆ, ಅಹಿಂಸೆಯ ಸಿದ್ಧಾಂತಗಳೆರಡು ಪ್ರಮುಖ ಪಾತ್ರ ವಹಿಸಿದ್ದವು ಎಂಬುದೇ ಇಲ್ಲಿ ಗಮನಿಸಬೇಕಾದ ಅಂಶ.
ಬ್ರಿಟಿಷ್ ರಾಜ್ಯ ವ್ಯವಸ್ಥೆಯ ಬಿಳಿಯರ ಬಂಧನದಲ್ಲಿದ್ದ ಭಾರತಾಂಬೆಯ ಆತ್ಮಕ್ಕೆ 1947 ಆಗಸ್ಟ್ ತಿಂಗಳಲ್ಲಿ ಮುಕ್ತಿ ಸಿಗುವ ಸ್ಪಷ್ಟ ಸೂಚನೆ ಸಿಕ್ಕಿತ್ತು. ಆದ್ರೆ ಈ ಆತ್ಮ ಮಾತ್ರ ಚಡಪಡಿಸುತ್ತಿತ್ತು. ಯಾಕಂದ್ರೆ ಮುಕ್ತಿ ಸಿಕ್ಕಿದ್ರೂ ಮುಂದಿನ ದಿನಗಳಲ್ಲಿ ನಡೆಯುವ ರಕ್ತಪಾತದ ಮುನ್ಸೂಚನೆ ಸಿಕ್ಕಿ, ಅದರ ನೋವು ಕಾಡಲು ಶುರುವಾಗಿತ್ತು. ಅಲ್ಲಿಯವರೆಗೆ ಆ ಒಂದು ಆತ್ಮವನ್ನು ಬಂಧನದಿಂದ ಬಿಡಿಸಲು ಜಾತಿ – ಧರ್ಮವನ್ನು ಮರೆತು ಹೋರಾಡುತ್ತಿದ್ದ ದೇಹದೊಗಳಗಿದ್ದ ಎರಡು ಅತೃಪ್ತ ಆತ್ಮಗಳು ನಂತರ ತಾವೇ ಜಗಳ ಮಾಡಿಕೊಳ್ಳಲು ಶುರು ಮಾಡಿದ್ದವು. ಕೊನೆಗೂ ಭಾರತಾಂಬೆಯ ಆತ್ಮವೂ ಎರಡು ಹೋಳಾಯ್ತು. ಅದುವೇ ಒಂದು ಭಾರತ.. ಇನ್ನೊಂದು ಪಾಕಿಸ್ತಾನ. ಅಂದ ಹಾಗೇ ಭಾರತದ ಆತ್ಮ.. 1947, ಆಗಸ್ಟ್ 15ರಂದು ವಿವಿಧತೆಯಲ್ಲಿ ಏಕತೆಯೊಂದಿಗೆ ಅಹಿಂಸಾ ತತ್ವದ ಹಾದಿಯಲ್ಲಿ ಮುನ್ನಡೆದ್ರೆ, 1947, ಆಗಸ್ಟ್ 14ರಂದು ಪಾಕಿಸ್ತಾನದ ಆತ್ಮ ಹಿಂಸೆಯ ಸಿದ್ದಾಂತದಲ್ಲಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಉದಯಕ್ಕೆ ಕಾರಣವಾಯ್ತು.
ಪಾಕಿಸ್ತಾನದ ಆತ್ಮ ಶುದ್ಧ.. ಸ್ವಚ್ಛವಾದ ತಾಣ ಎಂಬ ಅರ್ಥದಲ್ಲೇ ಹೆಸರನ್ನು ನಾಮಕರಣ ಮಾಡಿತ್ತು. ಹಾಗೇ ನೋಡಿದ್ರೆ ಪಾಕಿಸ್ತಾನ ಹೆಸರನ್ನು 1933ರಲ್ಲೇ ಪರಿಚಯಿಸಲಾಗಿತ್ತು. ಪಾಕಿಸ್ತಾನ ಚಳವಳಿಯ ಹೋರಾಟಗಾರ ರಹಮತ್ ಆಲಿ, ಪಂಜಾಬ್, ಆಫ್ಘಾನಿಯಾ, ಕಶ್ಮೀರ್, ಸಿಂಧು ಹಾಗೂ ಬಲೂಚಿಸ್ತಾನ ಹೆಸರನ್ನಿಟ್ಟುಕೊಂಡು ಪಾಕಿಸ್ತಾನ ಎಂದು ಹೆಸರಿಡಲಾಗಿತ್ತು. ಪಾಕಿಸ್ತಾನ ಅಂದ್ರೆ ಪರ್ಶಿಯನ್ ಮತ್ತು ಉರ್ದು ಭಾಷೆಗಳಲ್ಲಿ ಆಧ್ಯಾತ್ಮಿಕವಾಗಿ ಶುದ್ಧ ಭೂಮಿ ಎಂಬ ಅರ್ಥವೂ ಇದೆ.
ಆದ್ರೆ ಪಾಕಿಸ್ತಾನ ಹೆಸರಿಗೂ ಆ ರಾಷ್ಟ್ರ ನಡೆದುಕೊಳ್ಳುತ್ತಿರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಪಾಕಿಸ್ತಾನ ಪ್ರತ್ಯೇಕ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಿದ ನಂತರದ ಆ ನಾಡಿನ ಚರಿತ್ರೆಯ ಪುಟಗಳಲ್ಲಿರುವುದೆಲ್ಲಾ ರಕ್ತಸಿಕ್ತ ಅಧ್ಯಾಯಗಳೇ. ಪರಿಶುದ್ಧವಾದ ಭೂಮಿಯಲ್ಲಿ 1947ರಿಂದ ಇಲ್ಲಿಯವರೆಗೆ ಹರಿದಿರುವುದು ಬರೀ ರಕ್ತವೇ ಹೊರತು ಪರಿಶುದ್ಧವಾದ ನೀರಲ್ಲ. ಮನಸಲ್ಲ. ಭಾರತದ ಆತ್ಮದ ವಿರುದ್ಧ ಸದಾ ಕೆಂಡಕಾರುತ್ತಲೇ, ಐದಾರು ಬಾರಿ ಯುದ್ಧ ಮಾಡಿ ಸೋತರೂ ಪಾಕಿಸ್ತಾನದ ಆತ್ಮಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ಕಾಶ್ಮೀರದ ವಿಚಾರವನ್ನೇ ಮುಂದಿಟ್ಟುಕೊಂಡು ಭಾರತದ ವಿರುದ್ಧ ಕೆಣಕಿ ಪೆಟ್ಟು ತಿಂದು, ಇಡೀ ಜಗತ್ತಿನ ಎದುರು ಬೆತ್ತಲೆಯಾದ್ರೂ, ಅದರೊಳಗಿನ ಸೇಡಿನ ಜ್ವಾಲೆ ಉರಿಯುತ್ತಲೇ ಇದೆ. ಭಾರತದ ವಿರುದ್ಧ ನೇರವಾಗಿ ಹೋರಾಟ ಮಾಡಲು ಸಾಧ್ಯವಾಗದ ಪಾಕಿಸ್ತಾನ, ಭಯೋತ್ಪಾದಕ ರಕ್ಕಸರು ಭಾರತೀಯರ ನೆತ್ತರು ಕುಡಿದಿದ್ದಾರೆ. ಮೇಲ್ನೋಟಕ್ಕೆ ಸ್ನೇಹ ಹಸ್ತ ಚಾಚಿ ನಂತರ ಬೆನ್ನ ಹಿಂದೆ ರಕ್ಕಸರನ್ನು ಬಿಟ್ಟು ಭಾರತದ ಮೇಲೆ ದಾಳಿ ನಡೆಸಿದ್ರೂ ಪಾಕಿಸ್ತಾನದ ಧ್ವೇಷ ಮಾತ್ರ ಕಮ್ಮಿಯಾಗಿಲ್ಲ. ನೆಹರು ಅವರಿಂದ ಮೋದಿಯ ತನಕ ಭಾರತದ ಪ್ರಧಾನಮಂತ್ರಿಗಳು ಪಾಕ್ ನಾಯಕರ ಕೈ ಕುಲುಕಿದ್ರೂ ಮುಂದೆ ನಡೆಯುತ್ತಿದ್ದದ್ದು ಮಾತ್ರ ರಕ್ತಚರಿತ್ರೆಯೇ. ಹಾಗಾಗಿಯೇ ಕಳೆದ ಎರಡು ದಶಕಗಳಿಂದ ಪಾಕಿಸ್ತಾನದ ಆತ್ಮದ ಸಹವಾಸವೇ ಬೇಡ ಅಂತ ಭಾರತದ ಆತ್ಮ ಅಂತರ ಕಾಯ್ದುಕೊಂಡಿದೆ.
ಎಷ್ಟೇ ಆದ್ರೂ ದಾಯಾದಿಗಳು ಎಂದು ಸುಮ್ಮನಿದ್ದ ಭಾರತದ ಆತ್ಮವನ್ನು ಕೆಣಕಿ ಮತ್ತೆ ಮತ್ತೆ ಪೆಟ್ಟು ತಿಂದ್ರೂ ಪಾಕ್ ಆತ್ಮಕ್ಕೆ ಮಾತ್ರ ಬುದ್ಧಿ ಬಂದಿಲ್ಲ. ಸದಾ ಗಾಂಧೀಜಿಯ ಅಹಿಂಸಾ ಮಂತ್ರ ಪಠಿಸುತ್ತಿದ್ದ ಭಾರತದ ಆತ್ಮ ಅನಿವಾರ್ಯವಾಗಿ ರಕ್ತ ಕುಡಿಯುತ್ತಿದ್ರೂ ನಂತರ ಶಾಂತವಾಗಿರುತ್ತದೆ. ಹಾಗೇ ರಕ್ಕಸರ ಕೈಗೆ ಸಿಲುಕಿ ನಲುಗುತ್ತಿರುವ ಪಾಕ್‍ನ ಆತ್ಮ ಬಂಧನದ ಮುಕ್ತಿಗಾಗಿ ಕಾಯುತ್ತಿದೆ. ಬಹುಶಃ ಅದನ್ನು ಬಂಧಮುಕ್ತಗೊಳಿಸಲು ಮುಂದೊಂದು ದಿನ ಭಾರತದ ಆತ್ಮವೇ ಮುಂದಾದ್ರೂ ಅಚ್ಚರಿ ಏನಿಲ್ಲ.
ಇದು ಭಾರತ – ಪಾಕಿಸ್ತಾನ ನಡುವಿನ ಆತ್ಮಗಳ ರಾಜಕೀಯ ಅಂತರಕಲಹ. ಹಾಗೇ ಇದಕ್ಕೆ ಕ್ರಿಕೆಟ್ ಕೂಡ ಹೊರತಲ್ಲ. ಭಾರತ – ಪಾಕಿಸ್ತಾನ ಇಬ್ಬಾಗ ಆದಾಗ ಎಲ್ಲವೂ ಬದಲಾವಣೆಯಾಯ್ತು. ರಾಜಕೀಯ, ಸೇನೆಯ ಜೊತೆಗೆ ಕ್ರೀಡಾ ಕ್ಷೇತ್ರವೂ ಇಬ್ಬಾಗವಾಯ್ತು. 1947ರ ತನಕ ಜೊತೆಯಾಗಿ ಆಡುತ್ತಿದ್ದವರು ನಂತರದ ದಿನಗಳಲ್ಲಿ ಪರಸ್ಪರ ಎದುರಬದುರು ಆಡಬೇಕಾಯ್ತು. ಎರಡು ದೇಶಗಳ ನಡುವೆ ಕ್ರೀಡಾ ಸ್ಪರ್ಧೆಗಿಂತ ಜಾಸ್ತಿ ಸೇಡು, ಜಿದ್ದಿನಿಂದ ಹೋರಾಟ ನಡೆಸುವುದನ್ನು ಅಂದಿಗೂ – ಇಂದಿನವರೆಗೂ ನೋಡ್ತಾ ಇದ್ದೀವೆ. ಅಂದ ಹಾಗೇ ಭಾರತ – ಪಾಕ್ ಇಬ್ಬಾಗ ಆದಾಗ ಆಗಿರುವ ಹಿಂಸೆ, ಆತ್ಯಾಚಾರ, ದಂಗೆ ಜಗತ್ತಿನ ಯಾವುದೇ ರಾಷ್ಟ್ರಗಳಲ್ಲಿ ನಡೆದಿಲ್ಲ. ಪುಣ್ಯಕ್ಕೆ ಭಾರತದಲ್ಲಿ ಯಾವುದೇ ಧರ್ಮದ ಅಲ್ಪಸಂಖ್ಯಾತರಿಗೆ ಭಯದ ವಾತಾವರಣವಿಲ್ಲ. ಆದ್ರೆ ಪಾಕಿಸ್ತಾನದಲ್ಲಿ ಹಾಗಿಲ್ಲ. ಅಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಬಿಡಿ, ಅಲ್ಲಿನ ಬಹುಸಂಖ್ಯಾತರಾಗಿರುವವರಿಗೂ ರಕ್ಷಣೆ ಇಲ್ಲ. ಪ್ರತಿದಿನ ಭಯದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಹೇಗೆ ಪ್ರಾಣ ರಕ್ಷಣೆ ಮಾಡಿಕೊಳ್ಳೋದು ಎಂಬುದು ಅವರ ದಿನ ನಿತ್ಯದ ಯೋಚನೆ.
ಅದಿರಲಿ, ನಾವು ಈಗ ಕ್ರಿಕೆಟ್ ವಿಷ್ಯಕ್ಕೆ ಬರೋಣ.. ಇಲ್ಲಿ ಕೂಡ ವ್ಯತ್ಯಾಸ ಏನು ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಅಖಂಡ ಹಿಂದೂಸ್ತಾನಕ್ಕೆ ಬಿಸಿಸಿಐ ಬಿಗ್ ಬಾಸ್ ಆಗಿತ್ತು. ಅಂದ್ರೆ ದೇಹ ಬೇರೆ ಬೇರೆಯಾದ್ರು ಆತ್ಮ ಒಂದೇ ಆಗಿತ್ತು. ಆದ್ರೆ ಸ್ವಾತಂತ್ರ್ಯ ನಂತರ 1952ರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜನ್ಮ ತಾಳಿತ್ತು. ಆಗ ಪಾಕ್ ತಂಡದಲ್ಲಿ ಭಾರತದ ಪರ ಆಡಿದ್ದವರೇ ಆಡಿದ್ದರು. ಭಾರತ ತಂಡದ ನಾಯಕನಾಗಿದ್ದ ವಿನೂ ಮಂಕಡ್ ನಾಯಕತ್ವದಲ್ಲಿ ಆಡಿದ್ದ ಅಬ್ದುಲ್ ಹಫೀಜ್ ಖಾದರ್, 1952ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಹಾಗೇ ಭಾರತದ ಪರ ಆಡಿದ್ದ ಅಮೀರ್ ಎಲಾಹಿ, ಗುಲ್ ಮಹಮ್ಮದ್ ಕೂಡ ಪಾಕ್ ತಂಡದ ಪರವಾಗಿ ಭಾರತದ ವಿರುದ್ಧ ಆಡಿದ್ದರು. ರಾಜಕೀಯ, ಅಂತರಂಗ ಬಿಟ್ಟು ಮೈದಾನದಲ್ಲೂ ಈ ಎರಡು ಆತ್ಮಗಳು ಜಿದ್ದಿನಿಂದ ಹೋರಾಟ ನಡೆಸಬೇಕಾದ ಅನಿರ್ವಾತೆ ಸೃಷ್ಠಿಯಾಯ್ತು.
ಅಂದ ಹಾಗೇ, ಇದು 22 ಯಾರ್ಡ್‍ನಲ್ಲಿ ಎರಡು ಆತ್ಮಗಳ ನಡುವಿನ ಹೋರಾಟದ ಕಹಾನಿ. ಹೌದು, ಭಾರತ ಮತ್ತು ಪಾಕಿಸ್ತಾನ ನಡುವೆ ಮೊದಲ ಟೆಸ್ಟ್ ಸರಣಿ ನಡೆದಿದ್ದು 1952ರಲ್ಲಿ. ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದುಕೊಂಡ್ರೆ, ಎರಡನೇ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ ಗೆದ್ದುಕೊಂಡಿತ್ತು. ಭಾರತ ಸೋತಾಗ ಅಲ್ಲಿ ಜೋರಾಗಿ ಗಲಾಟೆಯೇ ನಡೆದಿತ್ತು. ಕೊನೆಗೂ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನ ಭಾರತ 2-1ರಿಂದ ಗೆದ್ದುಕೊಂಡಿತ್ತು.
1952ರಿಂದ 60ರವರೆಗೆ 10 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದರೇ, ಒಂದು ಪಂದ್ಯ ಮಾತ್ರ ಪಾಕ್ ಗೆದ್ದಿದೆ. ಇನ್ನುಳಿದ ಏಳು ಪಂದ್ಯಗಳು ಡ್ರಾಗೊಂಡಿವೆ.
ಹಾಗೇ 1960ರಿಂದ 70ರವರೆಗೆ ಐದು ಟೆಸ್ಟ್ ಪಂದ್ಯಗಳು ನಡೆದಿವೆ. ಐದೂ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಈ ನಡುವೆ 1965ರ ಇಂಡೋ – ಪಾಕ್ ಯುದ್ಧದಿಂದ ಹೆಚ್ಚು ಪಂದ್ಯಗಳನ್ನು ಉಭಯ ತಂಡಗಳು ಆಡಿರಲಿಲ್ಲ.
ಇನ್ನು, 1970ರಿಂದ 80ರವರೆಗೆ 9 ಟೆಸ್ಟ್ ಪಂದ್ಯಗಳ ಪೈಕಿ ಭಾರತ ಮತ್ತು ಪಾಕ್ ತಲಾ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ ಐದು ಪಂದ್ಯಗಳು ಡ್ರಾಗೊಂಡಿವೆ. 1980ರಿಂದ -90ರಲ್ಲಿ ಪಾಕ್ ಕ್ರಿಕೆಟ್ ಯಶಸ್ಸಿನ ಉತ್ತುಂಗದಲ್ಲಿತ್ತು. ಆಡಿರುವ 20 ಟೆಸ್ಟ್ ಪಂದ್ಯಗಳಲ್ಲಿ ಭಾರತ ಒಂದೂ ಪಂದ್ಯವನ್ನು ಗೆದ್ದಿಲ್ಲ. ಪಾಕಿಸ್ತಾನ ನಾಲ್ಕು ಪಂದ್ಯಗಳನ್ನು ಗೆದ್ರೆ, 16 ಪಂದ್ಯಗಳು ಡ್ರಾಗೊಂಡಿವೆ. ಹಾಗೇ 1990ರಿಂದ 2007ರವರೆಗೆ 15 ಟೆಸ್ಟ್ ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಭಾರತ ಗೆದ್ರೆ, ಐದು ಪಂದ್ಯಗಳಲ್ಲಿ ಪಾಕ್ ಗೆದ್ದಿದೆ. ಐದು ಪಂದ್ಯಗಳು ಡ್ರಾಗೊಂಡಿವೆ. 2007ರ ಮುಂಬೈ ಬ್ಲ್ಯಾಸ್ಟ್ ನಂತರ ಭಾರತ – ಪಾಕ್ ನಡುವೆ ಯಾವುದೇ ಟೆಸ್ಟ್ ಪಂದ್ಯ ನಡೆದಿಲ್ಲ. ಒಟ್ಟಾರೆ, 59 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ 12 ಪಂದ್ಯಗಳನ್ನು ಗೆದ್ರೆ, ಭಾರತ ಗೆದ್ದಿರುವುದು 9 ಪಂದ್ಯ ಮಾತ್ರ. 38 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
ಇನ್ನು, ಏಕದಿನ ಪಂದ್ಯವೂ ಅಷ್ಟೇ. ಭಾರತದ ವಿರುದ್ಧ ಪಾಕಿಸ್ತಾನ ತಂಡವೇ ಮೇಲುಗೈ ಸಾಧಿಸಿದೆ. ಆಡಿರುವ 136 ಪಂದ್ಯಗಳಲ್ಲಿ 58 ಪಂದ್ಯಗಳಲ್ಲಿ ಭಾರತ ಗೆದ್ರೆ, 73 ಪಂದ್ಯಗಳಲ್ಲಿ ಪಾಕಿಸ್ತಾನ ಜಯ ಸಾಧಿಸಿದೆ. ಐದು ಪಂದ್ಯಗಳಲ್ಲಿ ಫಲಿತಾಂಶ ಹೊರಬಂದಿಲ್ಲ. 1970ರಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಭಾರತ ಒಂದು ಪಂದ್ಯ ಹಾಗೂ ಪಾಕಿಸ್ತಾನ 2 ಪಂದ್ಯಗಳಲ್ಲಿ ಜಯ ಸಾಧಿಸಿದೆ. 1980 – 90ರಲ್ಲಿ 30 ಪಂದ್ಯಗಳನ್ನು ಆಡಿದ್ದು, 9ರಲ್ಲಿ ಭಾರತ ಹಾಗೂ 19ರಲ್ಲಿ ಪಾಕ್ ಗೆಲುವು ಸಾಧಿಸಿದೆ. 1990ರಿಂದ 2000ದವರೆಗೆ 45 ಪಂದ್ಯಗಳಲ್ಲಿ ಭಾರತ 17 ಪಂದ್ಯ ಹಾಗೂ ಪಾಕ್ 27 ಪಂದ್ಯಗಳಲ್ಲಿ ಜಯ ಸಾಧಿಸಿದೆ. 2000-2010ರವರೆಗೆ 40 ಪಂದ್ಯಗಳಲ್ಲಿ ಭಾರತ 18 ಗೆಲುವು, ಪಾಕಿಸ್ತಾನ 22 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. 2010ರಿಂದ 2020ರವರೆಗೆ 14 ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದ್ರೆ, 4 ಪಂದ್ಯಗಳಲ್ಲಿ ಪಾಕ್ ಗೆಲುವು ಕಂಡಿದೆ. 2020ರಿಂದ ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಭಾರತ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ರದ್ದುಗೊಂಡಿದೆ. ಪಾಕ್ ಒಂದೂ ಪಂದ್ಯವನ್ನು ಗೆದ್ದಿಲ್ಲ.
ಇನ್ನು 16 ಟಿ-20 ಪಂದ್ಯಗಳಲ್ಲಿ 13 ಪಂದ್ಯಗಳನ್ನು ಭಾರತ ಗೆದ್ದುಕೊಂಡ್ರೆ, ಪಾಕಿಸ್ತಾನ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. 15 ಏಷ್ಯಾಕಪ್ ಏಕದಿನ ಪಂದ್ಯಗಳಲ್ಲಿ ಭಾರತ ಎಂಟು ಹಾಗೂ ಪಾಕಿಸ್ತಾನಕ್ಕೆ ಐದು ಪಂದ್ಯಗಳಲ್ಲಿ ಜಯ ಲಭಿಸಿದೆ. ಆರು ಏಷ್ಯಾಕಪ್ ಟಿ-20 ಪಂದ್ಯಗಳಲ್ಲಿ ಭಾರತ ಐದು ಬಾರಿ ಹಾಗೂ ಪಾಕ್ ಒಂದು ಪಂದ್ಯ ಮಾತ್ರ ಗೆದ್ದಿದೆ. ಆದ್ರೆ ಏಕೈಕ ಏಷ್ಯನ್ ಟೆಸ್ಟ್ ಚಾಂಪಿಯನ್‍ಷಿಪ್ ಅನ್ನು ಪಾಕ್ ಗೆದ್ದುಕೊಂಡಿದೆ.
ಅಚ್ಚರಿ ಏನು ಅಂದ್ರೆ ಐಸಿಸಿ ಏಕದಿನ ವಿಶ್ವಕಪ್‍ನಲ್ಲಿ ಮುಖಾಮುಖಿಯಾಗಿದ್ದ ಎಂಟು ಪಂದ್ಯಗಳಲ್ಲೂ ಭಾರತ ಪಾಕ್ ತಂಡವನ್ನು ಸೋಲಿಸಿದೆ. ಹಾಗೇ ಟಿ-20 ವಿಶ್ವಕಪ್‍ನ ಎಂಟು ಪಂದ್ಯಗಳಲ್ಲಿ ಭಾರತ ಏಳು ಬಾರಿ ಹಾಗೂ ಪಾಕ್ ಒಂದು ಬಾರಿ ಗೆಲುವಿನ ನಗೆ ಬೀರಿದೆ. ಹಾಗೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಆರು ಬಾರಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ತಲಾ ಮೂರು ಬಾರಿ ಗೆಲುವು ದಾಖಲಿಸಿವೆ. ಒಟ್ಟಾರೆಯಾಗಿ, ಭಾರತ ಏಳು ಐಸಿಸಿ ಟ್ರೋಫಿ ಗೆದ್ದುಕೊಂಡ್ರೆ, ಪಾಕ್ ಮೂರು ಐಸಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಹಾಗೇ ನೋಡಿದ್ರೆ, ಪಾಕ್ ಕ್ರಿಕೆಟ್ ವಿಶ್ವ ಕ್ರಿಕೆಟ್‍ಗೆ ಅದ್ಭುತ ಕ್ರಿಕೆಟಿಗರನ್ನು ಕೊಡುಗೆಯಾಗಿ ನೀಡಿದೆ. ಇಮ್ರಾನ್ ಖಾನ್, ಜಾವೇದ್ ಮಿಯಾಂದಾದ್, ರಮೀಜ್ ರಾಜಾ, ವಾಸಿಂ ಅಕ್ರಮ್, ವಕಾರ್ ಯೂನಸ್, ಇಂಜಿ, ಮಹಮ್ಮದ್ ಯೂಸೂಫ್, ಅಬ್ದುಲ್ ರಜಾಕ್, ಸಲೀಂ ಮಲ್ಲಿಕ್, ಅಬ್ದುಲ್ ಕಾದೀರ್, ಸಕ್ಲೇನ್ ಮುಸ್ತಾಕ್, ಶೋಯಿಬ್ ಅಖ್ತರ್, ಶಾಹೀದ್ ಆಫ್ರಿಧಿ, ಸಯೀದ್ ಅನ್ವರ್, ಬಾಬರ್ ಹೀಗೆ ಅನೇಕ ಸ್ಟಾರ್ ಬ್ಯಾಟರ್ ಗಳು ಹಾಗೂ ವೇಗದ ಬೌಲರ್ ಗಳು ವಿಶ್ವ ಕ್ರಿಕೆಟ್‍ನಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. ಅದರಲ್ಲೂ 1980ರಿಂದ 2000ದವರೆಗೆ ಪಾಕ್ ಕ್ರಿಕೆಟ್‍ನ ಸುವರ್ಣ ಯುಗ ಅಂದರೆ ಖಂಡಿತಾ ತಪ್ಪಲ್ಲ.
ವಿಪರ್ಯಾಸ ಅಂದ್ರೆ ಪಾಕ್ ಕ್ರಿಕೆಟ್ ಇಂದು ಅಧಃಪತನದತ್ತ ಸಾಗುತ್ತಿದೆ. ಕಾರಣ ಅತೃಪ್ತ ಆತ್ಮದ ದುರಾಸೆ.. ಮತ್ಸರ.. ಸೇಡು. ಅಷ್ಟೇ ಅಲ್ಲ, ಪಾಕ್ ಸರ್ಕಾರದ ಧೋರಣೆ, ಸರ್ಕಾರದ ಕೈಗೊಂಬೆಯಾಗಿರುವ ಪಿಸಿಬಿಯ ದುರಾಡಳಿತದಿಂದ ಪಾಕ್ ನಲ್ಲಿ ಕ್ರಿಕೆಟ್‍ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ.
ಹಾಗೇ ನೋಡಿದ್ರೆ, ಭಾರತದಂತೆ ಪಾಕ್‍ನಲ್ಲೂ ಕ್ರಿಕೆಟ್ ಧರ್ಮವಾಗಿ ಬೆಳೆಯುತ್ತಿತ್ತು. ಆದ್ರೆ ಭಯೋತ್ಪಾದನೆ ಆ ದೇಶಕ್ಕೆ ಮುಳುವಾಗುತ್ತಿದೆ. ಅದು ಬರೀ ಕ್ರಿಕೆಟ್‍ಗೆ ಮಾತ್ರವಲ್ಲ. ಎಲ್ಲ ಕ್ಷೇತ್ರವನ್ನು ನಶಿಸಿ ಹಾಕುತ್ತಿದೆ. ಹೀಗಾಗಿ ಬೇರೆ ದೇಶಗಳು ಪಾಕ್ ನೆಲದಲ್ಲಿ ಕ್ರಿಕೆಟ್ ಆಡಲು ಹಿಂದೇಟು ಹಾಕುತ್ತಿವೆ. ಇದು ಪಾಕ್ ಕ್ರಿಕೆಟ್ ದೊಡ್ಡ ಪೆಟ್ಟು ನೀಡುತ್ತಿದೆ.
ಒಂದಂತೂ ಸತ್ಯ ಭಾರತ – ಪಾಕ್ ನಡುವೆ ಕ್ರಿಕೆಟ್ ಆಟದಿಂದ ಸ್ನೇಹದ ಬಾಂಧವ್ಯ ವೃದ್ದಿಯಾಗುತ್ತದೆ ಎಂಬುದು ಅಪ್ಪಟ ಸುಳ್ಳು. ಅದು ಸಾಧ್ಯನೇ ಇಲ್ಲ. 1987ರಲ್ಲಿ ಪಾಕ್ ಅಧ್ಯಕ್ಷ ಝೀಯಾ ಉಲ್ ಹಕ್ ಅನಿರೀಕ್ಷಿತವಾಗಿ ಭಾರತ – ಪಾಕ್ ಪಂದ್ಯವನ್ನು ವೀಕ್ಷಣೆ ಮಾಡಿದ್ದರು. ಬಳಿಕ 1992ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟ ನಡೆಯಿತ್ತು. ಹಾಗೇ 1998-99ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ನವಾಜ್ ಶರೀಫ್ ಭೇಟಿಯಾಗಿ ಲಾಹೋರ್ ಬಸ್ ಯಾತ್ರೆ ದೊಡ್ಡ ಸುದ್ದಿಯಾಗಿತ್ತು. ಬಳಿಕ ಭಾರತ – ಪಾಕ್ ನಡುವೆ ಕ್ರಿಕೆಟ್ ಸರಣಿ ನಡೆಯಿತ್ತು. ನಂತ್ರ ಕಾರ್ಗಿಲ್ ವಾರ್ ನಡೆಯಿತ್ತು. ಆದಾದ ಬಳಿಕ 2004ರಲ್ಲಿ ಭಾರತ ಪಾಕ್ ಪ್ರವಾಸ ನಡೆಸಿತ್ತು, ಆಗಿನ ಅಧ್ಯಕ್ಷ ಮುಷರಪ್ ದೋಸ್ತಿ ಅಂತ ಹಸ್ತಲಾಘವ ಮಾಡಿದ್ರು. 2005ರಲ್ಲಿ ಪಾಕ್ ತಂಡದ ಭಾರತ ಪ್ರವಾಸ, 2005ರಲ್ಲಿ ಮತ್ತೆ ಭಾರತದ ಪಾಕ್ ಪ್ರವಾಸ, 2007ರಲ್ಲಿ ಪಾಕ್ ತಂಡದ ಭಾರತ ಪ್ರವಾಸದಲ್ಲಿ ದ್ವಿಪಕ್ಷೀಯ ಸರಣಿ ನಡೆದಿತ್ತು. ಅದಕ್ಕೆ ಪ್ರತಿಫಲ ಭಾರತಕ್ಕೆ ಸಿಕ್ಕಿದ್ದು 2007ರ ಮುಂಬೈ ಬ್ಲ್ಯಾಸ್ಟ್. ಆದಾದ ನಂತರ 2011ರ ವಿಶ್ವಕಪ್‌ನಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಪ್ರಧಾನಿ ಸೈಯದ್ ಯೂಸುಫ್ ಗಿಲಾನಿ ಜೊತೆಯಾಗಿ ಪಂದ್ಯವನ್ನು ವೀಕ್ಷಣೆ ಮಾಡಿದ್ದರು. ಆದಾದ ನಂತರ ಭಾರತ – ಪಾಕ್ ನಡುವಿನ ರಾಜಕೀಯ ನಾಯಕರು ಮೈದಾನದಲ್ಲಿ ಜೊತೆಯಾಗಿ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಯುಗಾಂತ್ಯದ ಮುನ್ಸೂಚನೆ? 2027ರ ವಿಶ್ವಕಪ್ ರೇಸ್‌ನಿಂದ ಕೊಹ್ಲಿ, ರೋಹಿತ್ ಔಟ್? ಎಬಿಡಿ ಸ್ಫೋಟಕ ಭವಿಷ್ಯ!
ಒಂದಂತೂ ಸತ್ಯ.. ಭಾರತ – ಪಾಕ್ ನಡುವೆ ಕ್ರಿಕೆಟ್‍ನಿಂದ ಬಾಂಧವ್ಯ ವೃದ್ಧಿಯಾಗುತ್ತದೆ ಅನ್ನೋದು ಕೇವಲ ಭ್ರಮೆ. ಇದೀಗ ಭಾರತ – ಪಾಕ್ ನಡುವೆ ಹ್ಯಾಂಡ್ ಶೇಕ್ ವಿಚಾರ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಪಾಕ್ ಆತ್ಮ ಪದೇ ಪದೇ ಮೋಸ ಮಾಡುತ್ತಿದೆ ಎಂದು ಈ ಬಾರಿ ಭಾರತದ ಆತ್ಮ ಅವರ ಜೊತೆ ಮಾತುಕತೆ ಇರಲಿ, ಪರಸ್ಪರ ಶೇಕ್ ಹ್ಯಾಂಡ್ ಮಾಡಲು ಕೂಡ ಹಿಂದೇಟು ಹಾಕುತ್ತಿದೆ. ಅಂದ ಮೇಲೆ ಪಾಕ್ ಆತ್ಮ ಎಷ್ಟು ಕ್ರೂರಿಯಾಗಿದೆ ಎಂಬುದು ಮನದಟ್ಟು ಆಗುತ್ತಿದೆ. ಪದೇ ಪದೇ ಎದುರಿಗೆ ಕಪಟ ಸ್ನೇಹದ ನಗೆ ಬೀರಿ ಬೆನ್ನಿಗೆ ಚೂರಿ ಹಾಕೋ ಪಾಕ್ ವಿರುದ್ಧ ಕ್ರಿಕೆಟ್ ಆಡಬೇಕಾ..? ಅದು ಟೂರ್ನಿ ಯಾವುದೇ ಆಗಿರಲಿ.. ಬಿಸಿಸಿಐ ಮತ್ತು ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತಗೆದುಕೊಳ್ಳಬೇಕು. ಅದನ್ನು ಬಿಟ್ಟು ಆಡಲು ಅನುಮತಿ ನೀಡಿ ಜಂಟಲ್ ಮ್ಯಾನ್ ಕ್ರಿಕೆಟ್‍ಗೆ ಧಕ್ಕೆಯನ್ನುಂಟು ಮಾಡುವುದು, ಕ್ರಿಕಟಿಗರನ್ನು ಬಲಿಪಶು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ..ಅನ್ನೋ ಪ್ರಶ್ನೆ ಕಾಡುತ್ತಿದೆ. ಈ ವಿಚಾರವನ್ನು ಭಾರತದ ಆತ್ಮ ಕೂಡ ವಿಮರ್ಶೆ ಮಾಡಿಕೊಳ್ಳಬೇಕಿದೆ.
ಏನೇ ಆಗ್ಲಿ..ಭಾರತ – ಪಾಕ್ ನಡುವಿನ ಕ್ರಿಕೆಟ್ ನಂಟು ಅದು ರಕ್ತ ಸಿಕ್ತ ಅಧ್ಯಾಯದಲ್ಲಿ ಮೂಡಿ ಬರುವ ಧ್ವೇಷದ ಆಟ. ಇದು ಸರಿ ಹೋಗಬೇಕಾದ್ರೆ ಅಹಿಂಸೆ ಮತ್ತು ಹಿಂಸೆಯ ಆತ್ಮಗಳು ಮತ್ತೆ ಎಷ್ಟೋ ಬಾರಿ ಜನ್ಮ ತಾಳಿ ಬರಬೇಕು.. ಅದಕ್ಕೆ ಅನ್ನೋದು ಪುನರಪಿ ಜನನಂ.. ಪುನರಪಿ ಮರಣಂ.
ಲೇಖಕರು: ಸನತ್ ರೈ
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








