ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸ್ ಇಲಾಖೆ ಅಕ್ರಮ ವಲಸಿಗರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದು, 34 ಮಂದಿ ಬಾಂಗ್ಲಾ ದೇಶದ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದಿದೆ. ಕಳೆದ ಒಂದು ವಾರದ ಅವಧಿಯಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿರಂತರವಾಗಿ ದಾಳಿ ನಡೆಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7ಕ್ಕೂ ಹೆಚ್ಚು ಮಂದಿ, ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ಮಂದಿ, ಮತ್ತು ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಮಂದಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳು ಸರಿಯಾದ ದಾಖಲೆಗಳಿಲ್ಲದೆ ನಗರದಲ್ಲಿ ವಾಸಿಸುತ್ತಿದ್ದರೆಂಬ ಮಾಹಿತಿ ಲಭಿಸಿದ್ದು, ನಿರ್ಮಾಣ ಕಾರ್ಮಿಕರು, ದೈನಂದಿನ ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
ವಶಕ್ಕೆ ಪಡೆದಿರುವ ಎಲ್ಲರನ್ನು ಪರಿಶೀಲನೆ ಹಾಗೂ ದಾಖಲೆ ತಪಾಸಣೆಗಾಗಿ ವಿಚಾರಣೆಗೆ ಒಳಪಡಿಸಲಾಗಿದ್ದು, ವಿದೇಶಿಗರ ಕಾಯ್ದೆಯಡಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಗತ್ಯ ಕ್ರಮಗಳ ನಂತರ ರಾಜ್ಯದಿಂದ ಹೊರಹಾಕುವ (ಡಿಪೋರ್ಟ್) ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಮುಂದೆಯೂ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ಮುಂದುವರೆಯಲಿದೆ, ನಗರದಲ್ಲಿ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.








