ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈಗ ಬ್ರದರ್ಸ್ ಅಂತೆ. ಹೋ.. ಹೋ..ಎಷ್ಟೊಂದು ಪ್ರೀತಿ, ಎಷ್ಟೊಂದು ಅಗಾಧವಾದ ಸ್ನೇಹ.. ಅಬ್ಬಾಬ್ಬಾ…ಯಾರನ್ನು ನಂಬಬೇಕು..? ಬೆನ್ನಿಗೆ ಚೂರಿ ಹಾಕುವುದು ಅಂದ್ರೆ ಇದೆ ಅಲ್ವಾ.. ?
ಅವತ್ತು ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅಂತಹುದ್ದೊಂದು ದಿಟ್ಟ ನಿರ್ಧಾರ ತೆಗೆದುಕೊಳ್ಳದೇ ಇರುತ್ತಿದ್ರೆ ಇವತ್ತು ಬಾಂಗ್ಲಾದೇಶ ಎಂಬ ದೇಶವೇ ವಿಶ್ವ ಭೂಪಟದಲ್ಲಿ ಇರುತ್ತಿರಲಿಲ್ಲ. ಪಾಕಿಸ್ತಾನದ ಕೈಗೊಂಬೆಯಾಗಿ ನರರಾಕ್ಷಸರು ಎಂಬ ಕುಖ್ಯಾತಿಯನ್ನು ಪಡೆದುಕೊಳ್ಳುತ್ತಿತ್ತು. ಆದ್ರೆ,
ಯುದ್ಧ ಮಾಡಿ ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಮುಕ್ತಿಕೊಟ್ಟಿರುವ ಭಾರತಕ್ಕೆ ಸಿಕ್ಕಿರುವುದಾದ್ರೂ ಏನು..? ಹಾಗೇ ನೋಡಿದ್ರೆ ಸ್ವತಂತ್ರ ಬಾಂಗ್ಲಾದೇಶಕ್ಕೆ ಭಾರತದ ಕೊಡುಗೆ ಸಾಕಷ್ಟಿದೆ. ಆರ್ಥಿಕವಾಗಿ ನೆರವು ನೀಡಿದ್ದ ಭಾರತಕ್ಕೆ ಈಗ ಬಾಂಗ್ಲಾ ದೇಶ ಮಹಾದ್ರೋಹ ಬಗೆಯುತ್ತಿದೆ.
ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಪಾಕ್‍ನಂತೆ ಬಾಂಗ್ಲಾದೇಶ ಕೂಡ ಭಾರತದ ಮೇಲೆ ಮುಗಿಬೀಳುತ್ತಿದೆ. ಪಾಕ್ ಕುಮ್ಮಕ್ಕಿನಿಂದ ಬಾಂಗ್ಲಾದೇಶದಲ್ಲಿ ಅಂತರಿಕ ಕಲಹ ಸೃಷ್ಟಿಸಿ ಪ್ರಧಾನಿ ಶೇಕ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯ್ತು. ಅಲ್ಲದೇ ಜೀವ ಭಯದಿಂದ ಓಡಿ ಬಂದ ಶೇಖ್ ಹಸೀನಾ ಅವರಿಗೆ ರಕ್ಷಣೆ ನೀಡಿದ್ದು ಭಾರತ ಸರ್ಕಾರ. ನಂತರ ಬಾಂಗ್ಲಾ ಮತ್ತು ಭಾರತದ ನಡುವಿನ ಸಂಬಂದ ಹದಗೆಟ್ಟಿತ್ತು. 2009ರಿಂದ 2024ರವರೆಗೆ ಶೇಖ್ ಹಸೀನಾ ಅವರು ಬಾಂಗ್ಲಾ ಪ್ರಧಾನಿಯಾಗಿದ್ದಾಗ ಭಾರತದ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಆದ್ರೆ ಈ ಸಂಬಂಧಕ್ಕೆ ಹುಳಿ ಹಿಂಡಿದ್ದು ಪಾಕಿಸ್ತಾನ ಎಂದು ಗುಟ್ಟಾಗಿರುವ ವಿಚಾರವೇನೂ ಅಲ್ಲ.
ಈಗಾಗಲೇ ಬಾಂಗ್ಲಾದೇಶವನ್ನು ರಾಜಕೀಯವಾಗಿ ಪಾಕ್ ಅತಂತ್ರಗೊಳಿಸಿದೆ. ಇದೀಗ ಕ್ರಿಕೆಟ್ ಆಟಕ್ಕೂ ಕಲ್ಲು ಹಾಕಿದೆ. ಪಾಕ್ ಮಾತನ್ನು ನಂಬಿ ಹಿಟ್‍ವಿಕೆಟ್ ಆದ ಬಾಂಗ್ಲಾದೇಶ 2026 ಟಿ-20 ವಿಶ್ವಕಪ್ ಟೂರ್ನಿಯಿಂದಲೇ ಗೆಟ್ ಔಟ್ ಆಗಿದೆ.
ಇತ್ತ ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಬಾಯ್ಕಟ್ ಮಾಡುವುದಾಗಿ ಬೆದರಿಕೆ ಹಾಕಿದೆ. ಹೀಗಾಗಿ ಪಾಕ್ ಥರ್ಡ್ ಅಂಪೈರ್ ರಿವ್ಯೂನಲ್ಲಿದೆ. ಇನ್ & ಔಟ್ ಬಟನ್ ಮೇಲೆ ಕೈಬೆರಳಿಟ್ಟಿರುವ ಐಸಿಸಿ ಯಾವ ಬಟನ್ ಪ್ರೆಸ್ ಮಾಡುತ್ತೆ ಅನ್ನೋದು ಸದ್ಯಕ್ಕಿರುವ ಕುತೂಹಲ.
ಅಂದ ಹಾಗೇ, ಪಾಕಿಸ್ತಾನ ಭಾರತದಲ್ಲಿ ಅಥವಾ ಭಾರತದ ವಿರುದ್ಧ ಆಡಲ್ಲ ಎಂದು ಹೇಳುವುದಕ್ಕೆ ಹಲವಾರು ಕಾರಣಗಳಿವೆ. ಅದನ್ನು ಒಪ್ಪಿಕೊಳ್ಳೋಣ. ಯಾಕಂದ್ರೆ ಭಾರತ ಪಾಕ್ ನೆಲದಲ್ಲಿ ಆಡಲ್ಲ ಎಂದು ಹೇಳಿದಾಗ ಪಾಕಿಸ್ತಾನ ಕೂಡ ಅದೇ ಮಾತು ಹೇಳುವುದು ತಪ್ಪೇನೂ ಅಲ್ಲ. ಅದಕ್ಕೆ ಐಸಿಸಿ ಕೂಡ ಉಭಯ ದೇಶಗಳ ನಡುವಿನ ಕ್ರಿಕೆಟ್ ಆಟವನ್ನು ತಟಸ್ಥ ತಾಣದಲ್ಲಿ ಆಡಿಸುವ ತೀರ್ಮಾನವನ್ನು ಕೂಡ ತೆಗೆದುಕೊಂಡಿದೆ.
ಐಸಿಸಿಯ ಈ ನಿರ್ಧಾರದಿಂದಲೇ ಪಾಕ್ ವಿಶ್ವ ಕ್ರಿಕೆಟ್ ನಲ್ಲಿ ಆಡುತ್ತಿದೆ. ಒಂದು ವೇಳೆ ಬಿಸಿಸಿಐ ಮನಸ್ಸು ಮಾಡಿದ್ರೆ ಯಾವತ್ತೋ ಪಾಕ್ ಕ್ರಿಕೆಟ್ ತಂಡಕ್ಕೆ ವಿಶ್ವ ಕ್ರಿಕೆಟ್‍ನಿಂದಲೇ ಗೇಟ್ ಪಾಸ್ ನೀಡಬಹುದಿತ್ತು. ಆದ್ರೆ ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಪಾಕ್ ಕ್ರಿಕೆಟ್‍ಗೆ ಇನ್ನೂ ಸ್ಥಾನಮಾನ ಸಿಗುತ್ತಿರುವುದು ಬಿಸಿಸಿಐ ಕೃಪೆಯಿಂದಲೇ ಎಂಬುದನ್ನು ಮರೆಯುವ ಹಾಗಿಲ್ಲ. ಯಾಕಂದ್ರೆ ಐಸಿಸಿ ಖಜಾನೆಯ ಶೇ.80ರಷ್ಟು ಹಣವನ್ನು ತುಂಬಿಸುವುದು ಬಿಸಿಸಿಐ. ಹೌದು, ವಿಶ್ವ ಕ್ರಿಕೆಟ್‍ಗೆ ಐಸಿಸಿ ಬಾಸ್ ಆಗಿರಬಹುದು.. ಆದ್ರೆ ಐಸಿಸಿಗೆ ಬಿಸಿಸಿಐನೇ ಕುಬೇರ.
ಸದ್ಯ ಬಾಂಗ್ಲಾ – ಪಾಕ್‍ನ ಪರಿಸ್ಥಿತಿಯನ್ನು ನೋಡಿದಾಗ, ಕೋ…. ತಾನು ಕೆಡುವುದಲ್ಲದೆ ವನವನ್ನೆಲ್ಲಾ ಕೆಡಿಸಿದ್ದಂತೆ ಎಂಬ ಗಾದೆ ಮಾತು ನೆನಪಿಗೆ ಬರುತ್ತೆ. ಭಾರತದ ವಿರುದ್ದ ಸೇಡು ತೀರಿಸಿಕೊಳ್ಳಲು ಬಾಂಗ್ಲಾದೇಶಕ್ಕೆ ಪ್ರಚೋಚನೆ ನೀಡಿದ ಪಾಕ್‍ನ ಪರಿಸ್ಥಿತಿ ಈಗ ಅಯೋಮಯವಾಗಿದೆ.
ಮೇಲ್ನೋಟಕ್ಕೆ ಭಾರತದ ವಿರುದ್ಧ ಆಡಲ್ಲ ಎಂದು ಪಾಕ್ ಡಂಗುರ ಸಾರಿದೆ. ಆದ್ರೆ ಅದರ ಮುಂದಿನ ಪರಿಣಾಮ ಏನಾಗುತ್ತೆ ಎಂದು ಗೊತ್ತಿದ್ರೂ ಪಾಕಿಸ್ತಾನ ಮಾತ್ರ ತನ್ನ ಭಂಡತನವನ್ನು ಬಿಟ್ಟಿಲ್ಲ. ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿರುವ ಪಿಸಿಬಿಯ ಬೊಕ್ಕಸಕ್ಕೆ ಈ ಪಂದ್ಯದಿಂದ ಕೋಟ್ಯಂತರ ರೂಪಾಯಿ ಹರಿದುಬರುತ್ತಿತ್ತು. ಅಷ್ಟೇ ಅಲ್ಲ, ಭಾರತದ ವಿರುದ್ದದ ಪಂದ್ಯದಿಂದ ಪಿಸಿಬಿಗೆ ಒಂದು ವರ್ಷಕ್ಕಾಗುವಷ್ಟು ಆದಾಯವೂ ಸಿಗುತ್ತಿತ್ತು. ಆದ್ರೆ ದ್ವೇಷ, ಅಸೂಯೆ, ಪ್ರತಿಕಾರ, ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಪಿಸಿಬಿ ಈಗ ದುಡ್ಡು, ಸ್ಥಾನಮಾನ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ.
ನಿಜ, ಭಾರತದಲ್ಲಿ ಪಾಕ್ ಆಡಲ್ಲ ಎಂದು ಹೇಳುವುದು ಓಕೆ.. ಆದ್ರೆ ಭಾರತದ ವಿರುದ್ದ ಪಂದ್ಯವನ್ನು ಬಾಯ್ಕಾಟ್ ಮಾಡುವುದು ಯಾಕೆ..? ಈ ಪ್ರಶ್ನೆಗೆ ಉತ್ತರ ಸಿಂಪಲ್. ಬಾಂಗ್ಲಾದೇಶದ ಒಲೈಕೆ ಮಾಡೋದು. ಯಾಕಂದ್ರೆ ಭಾರತದಲ್ಲಿ ನಾವು ಆಡಲ್ಲ.. ನೀವೂ ಆಡೋದು ಬೇಡ.. ತಟಸ್ಥ ತಾಣದಲ್ಲಿ ಆಡುವಂತೆ ಐಸಿಸಿಗೆ ಒತ್ತಡ ಹೇರುವಂತೆ ಬಾಂಗ್ಲಾದೇಶಕ್ಕೆ ಕಿವಿಹಿಂಡಿದ್ದು ಇದೇ ಪಾಕಿಸ್ತಾನ.
ಆದ್ರೆ ಪಾಕ್ ಮಾತನ್ನು ನಂಬಿದ್ದ ಬಾಂಗ್ಲಾದೇಶ ಐಸಿಸಿಗೆ ಮನವಿಯನ್ನು ಸಲ್ಲಿಸಿತ್ತು. ಬಾಂಗ್ಲಾ ಮನವಿಯನ್ನು ತಿರಸ್ಕರಿಸಿದ್ದ ಐಸಿಸಿ, ಆಡುವುದಾದ್ರೆ ಆಡಿ ಇಲ್ಲ ಅಂದ್ರೆ ಬೇಡ ಎಂದು ಟೂರ್ನಿಯಿಂದಲೇ ಹೊರದಬ್ಬಿದೆ. ಈ ಅವಮಾನಕ್ಕೆ ಪ್ರತಿಕಾರವಾಗಿ ಪಾಕ್ ಸರ್ಕಾರ ಹೊಸ ವರಸೆ ಶುರು ಮಾಡಿದೆ. ಭಾರತದ ವಿರುದ್ದ ಆಡಲ್ಲ ಎಂದು ಬೆದರಿಕೆ ಹಾಕಿರುವ ಪಾಕಿಸ್ತಾನದ ಪರಿಸ್ಥಿತಿ ಈಗ ಅತ್ತ ದರಿ.. ಇತ್ತ ಪುಲಿ ಎಂಬ ಗಾದೆ ಮಾತಿನಂತಿದೆ.
ಒಂದಂತೂ ಸತ್ಯ.. ಭಾರತಕ್ಕೂ ಪಾಕ್ ವಿರುದ್ದ ಕ್ರಿಕೆಟ್ ಆಡಲೇಬೇಕು ಎಂಬ ಅನಿವಾರ್ಯತೆ ಇಲ್ಲ. ಪಿಸಿಬಿ ಬೊಕ್ಕಸಕ್ಕೆ ದುಡ್ಡು ತುಂಬಿಸುವ ಅಗತ್ಯವೂ ಭಾರತಕ್ಕಿಲ್ಲ. ಯಾಕಂದ್ರೆ ಪಿಸಿಬಿಯ ಹಣ ಕ್ರಿಕೆಟ್ ಆಟಗಾರರಿಗಿಂತ ಜಾಸ್ತಿ ರಕ್ಕಸರ ಜೇಬಿಗೆ ಸೇರುತ್ತೆ ಎಂಬ ವಿಚಾರವೂ ಗೊತ್ತಿದೆ. ಭಾರತ – ಪಾಕ್ ನಡುವಿನ ದ್ವಿಪಕ್ಷೀಯ ಸರಣಿ ರದ್ದುಗೊಂಡಿರುವುದಕ್ಕೆ ಇದು ಕೂಡ ಒಂದು ಕಾರಣವಾಗಿದೆ. ಅದಕ್ಕಾಗಿಯೇ ಬಿಸಿಸಿಐ ಪಾಕ್ ನಿಲುವಿನ ಬಗ್ಗೆ ಮೌನವಾಗಿದೆ. ಕಾದು ನೋಡುವ ತಂತ್ರದ ಜೊತೆಗೆ ಐಸಿಸಿ ನಿರ್ಧಾರವನ್ನು ಎದುರು ನೋಡುತ್ತಿದೆ.
ಇಲ್ಲಿ ಪಾಕಿಸ್ತಾನ ನೆನಪಿಟ್ಟುಕೊಳ್ಳಬೇಕಾದ ವಿಚಾರ ಏನು ಅಂದ್ರೆ, ರಾಜತಾಂತ್ರಿಕವಾಗಿ, ಆರ್ಥಿಕವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಲು ಅಮೆರಿಕಾ, ಚೀನಾ, ಯುಎಇನ ಕೆಲವು ರಾಷ್ಟ್ರಗಳು ಮುಂದೆ ಬರಬಹುದು. ಆದ್ರೆ ಕ್ರಿಕೆಟ್ ಜಗತ್ತಿನಲ್ಲಿ ಪಾಕ್ ಅನ್ನು ಬೆಂಬಲಿಸುವ ರಾಷ್ಟ್ರಗಳು ತೀರಾ ಕಡಿಮೆ. ಮೊದಲೇ ಪಾಕ್ ನೆಲದಲ್ಲಿ ಆಡಲು ಬಹುತೇಕ ರಾಷ್ಟ್ರಗಳು ಹಿಂದೆ ಮುಂದೆ ಯೋಚನೆ ಮಾಡುತ್ತಿವೆ.
ಒಟ್ಟಿನಲ್ಲಿ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ ಈಗ ಐಸಿಸಿ ಕೈಯಲ್ಲಿದೆ. ಪಾಕ್ ಸರ್ಕಾರದ ಹಸ್ತಕ್ಷೇಪದ ಕಾರಣವನ್ನು ಮುಂದಿಟ್ಟುಕೊಂಡು ಪಾಕ್ ಕ್ರಿಕೆಟ್ ತಂಡದ ಐಸಿಸಿ ಸದಸ್ಯತ್ವವನ್ನೇ ರದ್ದುಗೊಳಿಸಬಹುದು. ಈ ಹಿಂದೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ತಂಡಗಳಿಗೆ ಐಸಿಸಿ ನಿಷೇಧ ಹೇರಿತ್ತು. ಇದೀಗ ಪಾಕ್‍ಗೂ ಅದೇ ಗತಿ ಬಂದ್ರೂ ಬರಬಹುದು. ಯಾಕಂದ್ರೆ ಪಾಕ್‍ಗೆ ಅಮೆರಿಕಾ, ಚೀನಾ ದೊಡ್ಡಣ್ಣ, ಚಿಕ್ಕಣ್ಣ ಆಗಿರಬಹುದು. ಆದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಭಾರತದ ಬಿಸಿಸಿಐನೇ ದೊಡ್ಡಣ್ಣನೂ ಹೌದು…ಒಡೆಯನೂ ಹೌದು.
ಸನತ್ ರೈ








