ಶ್ರೀಲಂಕಾದಲ್ಲಿ ಹರ ಹರ ಮಹದೇವ..!
ಭಾರತದಲ್ಲಿ ಓಂ ನಮಃ ಶಿವಾಯಃ..!
ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!
ಇದೆಂಥಾ ಕಾಕತಾಳೀಯ.. ಹೇಳಿ ಕೇಳಿ.. ಶ್ರೀಲಂಕಾ ಹರ ಹರ ಮಹದೇವನ ಪರಮಭಕ್ತ ರಾವಣನ ತವರೂರು. ಭರತ ಖಂಡದಲ್ಲಿ ಮಹಾಭಾರತ ಯುದ್ದ ನಡೆದಿದ್ರೆ, ಲಂಕಾದಲ್ಲಿ ನಡೆದಿದ್ದು ರಾಮಾಯಣದ ಪ್ರಮುಖ ಯುದ್ಧ. ಭರತ ಖಂಡದ ಎರಡು ಪೌರಾಣಿಕ ಯುದ್ಧಗಳು ನಡೆದಿರುವುದು ಕೂಡ ಅಧರ್ಮದ ವಿರುದ್ಧವೇ. ಆದ್ರೆ ಇಲ್ಲಿ ನಡೆದಿರುವುದು ಧರ್ಮ- ಅಧರ್ಮದ ನಡುವಿನ ಯುದ್ಧವಲ್ಲ. ಬದಲಾಗಿ ಕ್ರಿಕೆಟ್ ಆಟವನ್ನೇ ಧರ್ಮವನ್ನಾಗಿ ಪೂಜಿಸುವ ಭಾರತ – ಪಾಕಿಸ್ತಾನ ನಡುವಿನ ಚೆಂಡು – ಬ್ಯಾಟಿನ ಸಂಘರ್ಷ. ಎರಡು ದೇಶಗಳ ನಡುವಿನ ಅಂತರಿಕ ಕಲಹ ಕ್ರಿಕೆಟ್ ಮೈದಾನದಲ್ಲೂ ರೋಷಾವೇಷದಿಂದ ಕೂಡಿರುತ್ತದೆ. ಇದಕ್ಕೆ ಮತ್ತೊಂದು ಸೇರ್ಪಡೆ ಇಂಡೋ – ಪಾಕ್ ನಡುವಿನ ಐಸಿಸಿ ಟಿ-20 ವಿಶ್ವಕಪ್‍ನ ಹೈವೋಲ್ಟೇಜ್ ಮ್ಯಾಚ್.
ಅದು ಕೂಡ ಮಹಾ ಶಿವರಾತ್ರಿಯಂದೇ.. ಭಾರತ – ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮುಹೂರ್ತವಿಟ್ಟಿದ್ದು ಕೂಡ ಕಾಕತಾಳೀಯವೇ. ಈ ನಡುವೆ, ಬಾಂಗ್ಲಾದೇಶಕ್ಕೆ ಕಪಾಳಮೋಕ್ಷ ಮಾಡಿದ್ದ ಐಸಿಸಿ ಮತ್ತು ಬಿಸಿಸಿಐ ವಿರುದ್ಧ ಮುನಿಸಿಕೊಂಡಿದ್ದ ಪಾಕಿಸ್ತಾನ ಭಾರತದ ವಿರುದ್ದ ಆಡಲ್ಲ ಎಂಬ ನಾಟಕವನ್ನಾಡಿತ್ತು. ಆಗ ಮಧ್ಯೆ ಪ್ರವೇಶಿಸಿದ ಶ್ರೀಲಂಕಾ ರಾಜೀಪಂಚಾಯಿತಿ ಮಾಡಿ ಕೊನೆಗೂ ದಾಯಾದಿಗಳ ಕದನವನ್ನು ತನ್ನೂರಿನಲ್ಲೇ ಯಾವುದೇ ಅಡೆತಡೆ ಇಲ್ಲದೆ ಸಂಘಟಿಸಿತ್ತು.
ಹೌದು, ಭಾರತ ಮತ್ತು ಶ್ರೀಲಂಕಾದಲ್ಲಿ ಭಕ್ತಾಧಿಗಳು ಮಹಾಶಿವರಾತ್ರಿಯ ಹಬ್ಬದಲ್ಲಿ ಓಂ ನಮಃ ಶಿವಾಯಃ ಮಂತ್ರ ಪಠಿಸುತ್ತಿದ್ರು. ಇನ್ನೊಂದೆಡೆ, ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಜೈ ಹೋ ಇಂಡಿಯಾ.. ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷ ವಾಕ್ಯಗಳು ಕೂಡ ಮಂತ್ರಘೋಷದಂತೆ ಕೊಲೊಂಬೋದ ಪ್ರೇಮದಾಸ ಅಂಗಣದಲ್ಲಿ ಮೊಳಗುತ್ತಿದ್ದವು.
ಟಾಸ್ ಗೆದ್ದ ಪಾಕಿಸ್ತಾನ ತನ್ನ ಅಚ್ಚರಿಯ ನಿರ್ಧಾರದಿಂದ ಕ್ರಿಕೆಟ್ ಜಗತ್ತನ್ನು ಚಕಿತಗೊಳಿಸಿತ್ತು. ಭಾರತವನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿ, ಮೊದಲ ಓವರ್‍ನಲ್ಲೇ ಸ್ಪಿನ್ ದಾಳಿಯ ಮೂಲಕ ಅಭಿಷೇಕ್ ಶರ್ಮಾರನ್ನು ಶೂನ್ಯ ಸುತ್ತುವಂತೆ ಮಾಡಿದ್ದು ಪಾಕ್ ನಾಯಕ ಸಲ್ಮಾನ್ ಅಘಾ.
ಆದ್ರೆ ಎರಡನೇ ಓವರ್‍ನಲ್ಲಿ ಗುರಿ ತಪ್ಪಿದ ರಾಕೆಟ್ ನಂತೆ ವೇಗವಾಗಿ ಬೌಲಿಂಗ್ ಮಾಡಿದ ಶಾಹೀನ್ ಆಫ್ರಿದಿ ತುಂಬಾನೇ ದುಬಾರಿಯಾದ್ರು. ಇದನ್ನು ಕ್ಷಣ ಮಾತ್ರದಲ್ಲೇ ಅರಿತುಕೊಂಡ ಪಾಕ್ ನಾಯಕ ಸಲ್ಮಾನ್ ಅಘಾ ಭಾರತದ ವಿರುದ್ದ ಸುದರ್ಶನ ಚಕ್ರ ಅಸ್ತ್ರ ಪ್ರಯೋಗಿಸಿದ್ರು.
ಎರಡಲ್ಲ… ಮೂರಲ್ಲ.. ಬರೋಬ್ಬರಿ ಆರು ಸ್ಪಿನ್ನರ್‍ಗಳ ಕೈಯಿಂದ ಚೆಂಡನ್ನು ಬುಗರಿಯಂತೆ ತಿರುಗಿಸಿಕೊಂಡು ಬೌಲಿಂಗ್ ದಾಳಿಗೆ ನಡೆಸಿದಾಗ ಭಾರತದ ಪ್ರಮುಖ ಬ್ಯಾಟರ್‍ಗಳು ರನ್ ಗಳಿಸಲು ಒದ್ದಾಟ ನಡೆಸಿದ್ರು. ಅಲ್ಲದೆ ಪ್ರತಿ ಕ್ಷಣ.. ಪ್ರತಿ ಎಸೆತ.. ಪ್ರತಿ ವಿಕೆಟ್.. ಪ್ರತಿ ರನ್.. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿರೋದಂತೂ ಸುಳ್ಳಲ್ಲ.
ಆದ್ರೆ ಟೀಮ್ ಇಂಡಿಯಾ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಾಸೆಯನ್ನು ಪೂರೈಸಲು ಮೈದಾನದಲ್ಲಿ ಲೀಲಾಧರನಂತೆ ಕಾಣಿಸಿಕೊಂಡಿದ್ದು ಇಶಾನ್ ಕಿಶಾನ್ ಎಂಬ ಬಿಸಿ ರಕ್ತದ ಹುಡುಗ. ಆರಂಭಿಕ ಅಘಾತದ ಜೊತೆಗೆ ರನ್ ಗಳಿಸಲು ಸ್ವಲ್ಪ ಒದ್ದಾಟ ನಡೆಸಿದ್ರೂ ಇಶಾನ್ ಕಿಶಾನ್ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ಪಾಕ್‍ನ ಸುದರ್ಶನ ಚಕ್ರದ ಮಹಿಮೆಯನ್ನು ಅರಿತುಕೊಂಡು ಆಡಿದ ಇಶಾನ್ ಕಿಶಾನ್ ಮಹಾದುರಂಧರನಂತೆ ಪ್ರೇಮದಾಸ ಅಂಗಣದಲ್ಲಿ ಕಂಗೋಳಿಸಿದ್ರು. ಈ ಹಿಂದೆ ಪಾಕ್ ವಿರುದ್ಧ ಸಚಿನ್, ವಿರಾಟ್ ಏಕಾಂಗಿಯಾಗಿ ಯಾವ ರೀತಿ ಆಡ್ತಾ ಇದ್ರೋ ಅದೇ ರೀತಿಯ ಮಹನ್ನೋತ್ತ ಇನಿಂಗ್ಸ್‍ಗೆ ಇಶಾನ್ ಕಿಶಾನ್ (77 ರನ್) ಕೂಡ ಸಾಕ್ಷಿಯಾದ್ರು.
ನಂತ್ರ ಪಾಕಿಸ್ತಾನ ಬೌಲರ್ ಗಳು ಭಾರತದ ಬ್ಯಾಟರ್ ಗಳನ್ನು ಒತ್ತಡಕ್ಕೆ ಸಿಲುಕಿಸಿದ್ರು. ತಿಲಕ್ ವರ್ಮಾ ಬ್ಯಾಟ್ ಹೆಚ್ಚು ಸದ್ದು ಮಾಡಲಿಲ್ಲ. ಹಾರ್ದಿಕ್ ಪಾಂಡ್ಯ ಹಾಗೇ ಬಂದು ಹೋದ್ರೆ, ಸೂರ್ಯನ ಪ್ರಭೆ ಕೂಡ ಪ್ರಕಾಶಿಸಲಿಲ್ಲ. ಕೊನೆಯ ಹಂತದಲ್ಲಿ ಶಿವಂ ದುಬೆ ಹಾಗೂ ರಿಂಕು ಸಿಂಗ್ ಹೊಡಿಬಡಿ ಆಟದಿಂದ ಭಾರತ 7 ವಿಕೆಟ್‍ಗೆ 175 ರನ್ ದಾಖಲಿಸಿತ್ತು.
ಗೆಲ್ಲಲು ಕಠಿಣ ಸವಾಲನ್ನು ಬೆನ್ನಟ್ಟಿದ್ದ ಪಾಕ್‍ಗೆ ಆಘಾತದ ಮೇಲೆ ಆಘಾತ ನೀಡಿದ್ದು ಮೇಕ್ ಇನ್ ಇಂಡಿಯಾದ ಬ್ರಹ್ಮೋಸ್ ಅಸ್ತ್ರಗಳು. ಜಸ್ಪ್ರಿತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ತನ್ನ ರಣಭೀಕರ ಎಸೆತಗಳಿಂದ ಪಾಕ್‍ನ ಬುಡವನ್ನೇ ಅಲುಗಾಡಿಸಿದ್ರು. ಇನ್ನೊಂದೆಡೆ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಕುಲ್‍ದಿಪ್ ಯಾದವ್, ತಿಲಕ್ ವರ್ಮಾ ಅವರ ಮಾಯಾಜಾಲಕ್ಕೆ ಸಿಲುಕಿದ ಪಾಕಿಸ್ತಾನ ಮತ್ತೊಮ್ಮೆ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ಶರಣಾಯ್ತು. ನನ್ನ ನೀನು ಗೆಲ್ಲಲಾರೆ ಎಂಬ ಭಾರತದ ಟ್ಯಾಗ್‍ಲೈನ್ ಮತ್ತೆ ಹೈಲೈಟ್ ಆಗಿದೆ.
ಹಾಗೇ ನೋಡಿದ್ರೆ, ಇತ್ತೀಚಿನ ದಿನಗಳಲ್ಲಿ ಇಂಡೋ -ಪಾಕ್ ನಡುವಿನ ಪಂದ್ಯಗಳಲ್ಲಿ ರೋಚಕತೆಯೇ ಇಲ್ಲ. ಜಸ್ಟ್ ಕಾಗದ ಮೇಲೆ ಬರೆಯಬಹುದಾದ ಅಕ್ಷರಗಳ ವಾಕ್ಸಮರ ಅಷ್ಟೇ.. ದಶಕಗಳ ಹಿಂದಿನ ಪಂದ್ಯಗಳನ್ನು ನೋಡಿದಾಗ ಬ್ಯಾಟರ್ – ಬೌಲರ್ ಗಳ ಕೆಚ್ಚೆದೆಯ ಹೋರಾಟವನ್ನು ಕಣ್ತುಂಬಿಕೊಳ್ಳುವುದೇ ಒಂಥರಾ ಖುಷಿ. ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಸೋತರೂ ಆ ಹೋರಾಟದ ಮನೋಭಾವವನ್ನು ನೋಡುವುದೇ ಚೆಂದವಾಗಿತ್ತು. ಆದ್ರೆ ಈಗಿನ ಪಾಕಿಸ್ತಾನ ತಂಡ ಹಾಗಿಲ್ಲ. ಅಲ್ಲಿನ ಸರ್ಕಾರ, ಮಾಜಿ ಆಟಗಾರರ ಅಧಿಕ ಪ್ರಸಂಗಿತನದ ಮಾತುಗಳಿಂದ ಪಾಕ್ ಕ್ರಿಕೆಟ್ ಬಡವಾಗಿದೆ. ಎಷ್ಟೇ ಪ್ರತಿಭಾವಂತ ಆಟಗಾರರಿದ್ರೂ ಇಲ್ಲ ಸಲ್ಲದ ಮಾತುಗಳನ್ನು ಕೇಳಿ ವಿಶ್ವ ಕ್ರಿಕೆಟ್‍ನ ಎದುರು ತನ್ನತನವನ್ನು ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ಹ್ಯಾಂಡ್ ಶೇಕ್ ವಿವಾದದಿಂದ ಹಿಡಿದು ಆಟದಲ್ಲೂ ಮಂಕಾಗಿರೋದು ಪಾಕ್ ಕ್ರಿಕೆಟ್‍ನ ದುಸ್ಥಿತಿ ಎದ್ದು ಕಾಣುತ್ತಿದೆ.
ಅಷ್ಟಕ್ಕೂ ಪಾಕ್ ಕ್ರಿಕೆಟ್ ಮಂಡಳಿ, ಪಾಕ್ ಸರ್ಕಾರ ಇಂದಿಗೂ ಭಾರತ ಕ್ರಿಕೆಟ್ ತಂಡವನ್ನು ಲಘುವಾಗಿ ಪರಿಗಣಿಸುತ್ತಿದೆ. ಆದ್ರೆ ಭಾರತೀಯ ಕ್ರಿಕೆಟ್ ಪಾಕ್ ಕ್ರಿಕೆಟ್‍ಗಿಂತಲೂ ಹತ್ತಾರು ಹೆಜ್ಜೆ ಮುಂದಿದೆ ಎಂಬುದು ಗೊತ್ತಿದ್ರೂ ಗೊತ್ತೇ ಇಲ್ಲ ಎಂದು ನಾಟಕವಾಡುತ್ತಿದೆ. ಪಾಕಿಸ್ತಾನ ಇನ್ನು ಮುಂದಾದ್ರೂ ನೈಜ ಕ್ರಿಕೆಟ್ ಗೆ ಪ್ರೋತ್ಸಾಹ ನೀಡದೆ ಕೇವಲ ತನ್ನ ಭಂಡತನದಿಂದ ಎಲ್ಲವನ್ನೂ ಗೆದ್ದುಬಿಡುತ್ತೇವೆ ಎಂದು ಮುಂದೆ ಸಾಗಿದರೆ ಮುಂದೊಂದು ದಿನ ಅದಕ್ಕೆ ಗೆಲುವು ಅನ್ನೋದು ಅದರ ಹಳೆಯ ನೆನಪುಗಳಲ್ಲಷ್ಟೇ ಸಿಗಲಿಕ್ಕೆ ಸಾಧ್ಯ.
ಸನತ್ ರೈ








