ಗೆಹ್ಲೋಟ್ ಸರ್ಕಾರ ಉಳಿಸಲು ಸಹಾಯ ಮಾಡಿದ್ರಾ ವಸುಂಧರಾ ರಾಜೆ..?
ಜೈಪುರ : ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ಸಹಾಯ ಮಾಡಿದ್ದಾರೆ ಎಂದು ಬಿಜೆಪಿ ಮಿತ್ರಪಕ್ಷದ ಆರ್ ಎಲ್ ಪಿ ಮುಖ್ಯಸ್ಥ ಹನುಮಾನ್ ಬೆನಿವಾಲ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬೆನಿವಾಲ್ ಅವರು, ಬಹುಮತ ಇಲ್ಲದಿರುವ ಅಶೋಕ್ ಗೆಹ್ಲೋಟ್‌ರನ್ನು ಬೆಂಬಲಿಸುವಂತೆ ವಸುಂಧರಾ ರಾಜೆ ವೈಯಕ್ತಿಕವಾಗಿ ಕಾಂಗ್ರೆಸ್ ಶಾಸಕರನ್ನು ಕರೆದಿದ್ದಾರೆ. ಈ ಮೂಲಕ ಗೆಹ್ಲೋಟ್ ಸರ್ಕಾರವನ್ನು ಉಳಿಸಲು ರಾಜೆ ಅವರು ಸಹಾಯ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ಟ್ವೀಟ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜಸ್ಥಾನ ಬಿಜೆಪಿಗೆ ಅವರು ಟ್ಯಾಗ್ ಮಾಡಿದ್ದಾರೆ.
ಅಲ್ಲದೆ ಟ್ವಿಟ್ಟರ್ ನಲ್ಲಿ ಬೆನಿವಾಲ್ ಅವರು, #Gehlot_Vasundhara_Gathjod ಎಂಬ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಅನೇಕ ಲೈಕ್ಸ್ ಮತ್ತು ರಿಟ್ವೀಟ್‌ಗಳು ಬಂದಿವೆ.
ಇನ್ನು ಹನುಮಾನ್ ಬೆನಿವಾಲ್ ಅವರ ಈ ಆರೋಪ ರಾಜಸ್ಥಾನ ರಾಜಕೀಯದಲ್ಲಿ ಸಂಚಲನ ಸೃಷ್ಠಿಸಿದೆ.








