ಪಶ್ಚಿಮ ಬಂಗಾಳದ ಝಾರ್‌ಗ್ರಾಮ್ ನಗರದಲ್ಲಿ ಮಂಡಕ್ಕಿ ಮಾರಾಟ ಮಾಡುವ ವಿಕ್ರಮ್ ಎಂಬ ವ್ಯಕ್ತಿಗೆ ಪ್ರಧಾನಿ ಮೋದಿ ಅವರು ತಮ್ಮ ಅಂಗಡಿಗೆ ಬರುತ್ತಾರೆ ಎಂಬುದು ಕನಸಿನ ಮಾತಾಗಿತ್ತು. ದೇಶದ ಪ್ರಧಾನ ಮಂತ್ರಿಗಳು ತಮ್ಮ ಬಳಿ ಬಂದು 10 ರೂಪಾಯಿ ನೀಡಿ ಮಂಡಕ್ಕಿ ಸವಿದ ಘಟನೆ ವಿಕ್ರಮ್ ಅವರಿಗೆ ಅಪಾರ ಸಂತೋಷ ತಂದಿದೆ. ಈಗ ಈ ವಿಡಿಯೋ ಇಂಟರ್ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.
ಪ್ರಧಾನಿ ಮೋದಿ ಅವರು ವಿಕ್ರಮ್ ಜೊತೆ ಸುಮಾರು 10 ನಿಮಿಷಗಳ ಕಾಲ ಆಪ್ತವಾಗಿ ಮಾತನಾಡಿದ್ದಾರೆ. ನೀವು ಈರುಳ್ಳಿ ತಿನ್ನುತ್ತೀರಾ ಎಂದು ವಿಕ್ರಮ್ ಕೇಳಿದಾಗ ಪ್ರಧಾನಿಗಳು ಸಾಮಾನ್ಯ ಗ್ರಾಹಕರಂತೆ ಉತ್ತರಿಸಿದ್ದಾರೆ. ವಿಕ್ರಮ್ ಮೂಲತಃ ಬಿಹಾರದ ಗಯಾ ಮೂಲದವರಾಗಿದ್ದು, ಬಡತನದ ಕಾರಣದಿಂದ ಕೇವಲ 9ನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾಯಿತು ಎಂದು ಪ್ರಧಾನಿ ಬಳಿ ನೋವು ಹಂಚಿಕೊಂಡಿದ್ದಾರೆ. ದಿನಕ್ಕೆ ಸಾವಿರದಿಂದ ಸಾವಿರದ ಇನ್ನೂರು ರೂಪಾಯಿ ವ್ಯಾಪಾರ ಮಾಡುವುದಾಗಿ ಅವರು ಮೋದಿ ಅವರಿಗೆ ತಿಳಿಸಿದ್ದಾರೆ. ಮಂಡಕ್ಕಿ ತಿಂದ ಮೇಲೆ ಮೋದಿ ಅವರು 10 ರೂಪಾಯಿ ನೀಡಿದಾಗ ವಿಕ್ರಮ್ ಹಣ ಬೇಡ ಎಂದರೂ ಪ್ರಧಾನಿಗಳು ಒತ್ತಾಯ ಮಾಡಿ ಹಣ ನೀಡಿದ್ದಾರೆ.
ಆದರೆ ಪ್ರಧಾನಿಗಳು ಹೋದ ನಂತರ ವಿಕ್ರಮ್ ಅವರಿಗೆ ಒಂದು ವಿಷಯದ ಬಗ್ಗೆ ತುಂಬಾ ಬೇಸರವಾಗಿದೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು ನಾನು ಒಂದು ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಜೊತೆ ಇಷ್ಟು ಹೊತ್ತು ಮಾತನಾಡಿದರೂ ಅವರಿಂದ ಒಂದು ಸಹಿ ಅಥವಾ ಆಟೋಗ್ರಾಫ್ ಪಡೆಯಲು ಮರೆತು ಹೋದೆ ಎಂಬುದು ಅವರ ಪಶ್ಚಾತ್ತಾಪವಾಗಿದೆ. ನಾವು ಒಂದು ತಪ್ಪು ಕೆಲಸ ಮಾಡಿದೆವು, ಅವರ ಸಹಿಯನ್ನು ಪಡೆಯಬೇಕಿತ್ತು ಎಂದು ವಿಕ್ರಮ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮೋದಿ ಅವರು ತಾವು ತಿಂದ ಮಂಡಕ್ಕಿಯನ್ನು ಅಲ್ಲಿ ನೆರೆದಿದ್ದ ಮಹಿಳೆಯರಿಗೂ ಹಂಚಿದ್ದಾರೆ. ಪ್ರಧಾನಿಗಳ ಕೈಯಿಂದ ಮಂಡಕ್ಕಿ ಪಡೆದ ಮಹಿಳೆಯೊಬ್ಬರು ಇದು ನಮಗೆ ದೇವರ ಪ್ರಸಾದದಂತೆ ಎಂದು ಹೇಳಿ ಅದನ್ನು ಭಕ್ತಿಯಿಂದ ತಲೆಗೆ ಹಚ್ಚಿಕೊಂಡು ಸಂಭ್ರಮಿಸಿದ್ದಾರೆ. ಪ್ರಧಾನಿಗಳ ಈ ಸರಳತೆಗೆ ಮತ್ತು ಸಾಮಾನ್ಯ ವ್ಯಾಪಾರಿಯೊಂದಿಗೆ ಅವರು ಬೆರೆತ ರೀತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.







