ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕಿಚ್ಚು ಈಗ ದೆಹಲಿಯ ಅಂಗಳ ತಲುಪಿದೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಹೈಕಮಾಂಡ್ ನಾಯಕರಿಗೆ ಮೇ 10ರ ಅಂತಿಮ ಗಡುವು ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ದೀರ್ಘಕಾಲದ ತಾಳ್ಮೆಯ ನಂತರ ಅಖಾಡಕ್ಕಿಳಿದ ಡಿಕೆಶಿ
ಕಳೆದ ವಿಧಾನಸಭಾ ಚುನಾವಣೆಯ ನಂತರ ಸರ್ಕಾರ ರಚನೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಪವರ್ ಶೇರಿಂಗ್ ಅಥವಾ ಅಧಿಕಾರ ಹಂಚಿಕೆಯ ಗುಟ್ಟನ್ನು ಈಗ ಬಹಿರಂಗಪಡಿಸಬೇಕು ಎಂದು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಎರಡೂವರೆ ವರ್ಷಗಳ ಅವಧಿ ಮುಗಿದು ಆರು ತಿಂಗಳ ಗ್ರೇಸ್ ಪೀರಿಯಡ್ ಕೂಡ ಅಂತ್ಯವಾಗುತ್ತಿರುವುದರಿಂದ, ಮುಂದಿನ ಅವಧಿಗೆ ತಮ್ಮ ನಾಯಕತ್ವದ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂಬುದು ಡಿಕೆಶಿ ಅವರ ನೇರ ಆಗ್ರಹವಾಗಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪ್ರತಿತಂತ್ರ
ಒಂದೆಡೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹೊಸ ತಂತ್ರ ರೂಪಿಸಿದ್ದಾರೆ. ಮೇ 20ಕ್ಕೆ ಸರ್ಕಾರ ಅಸ್ತಿತ್ವಕ್ಕೆ ಬಂದು ಮಹತ್ವದ ಘಟ್ಟ ತಲುಪುತ್ತಿರುವ ಹಿನ್ನೆಲೆಯಲ್ಲಿ, ಸಚಿವ ಸಂಪುಟ ಪುನಾರಚನೆಗೆ ಅನುಮತಿ ಕೇಳುವ ಮೂಲಕ ತಮ್ಮ ನಾಯಕತ್ವಕ್ಕೆ ಯಾವುದೇ ಧಕ್ಕೆ ಇಲ್ಲ ಎಂಬ ಸಂದೇಶವನ್ನು ರವಾನಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಆಪ್ತ ಸಚಿವರೊಂದಿಗೆ ನಡೆಸಿದ ಡಿನ್ನರ್ ಮೀಟಿಂಗ್ ನಲ್ಲಿ ಈ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ರಾಹುಲ್ ಗಾಂಧಿ ಸಮ್ಮುಖದಲ್ಲಿ ಅಂತಿಮ ತೀರ್ಮಾನದ ಸಾಧ್ಯತೆ
ಈಗಿನ ಬೆಳವಣಿಗೆಗಳ ಪ್ರಕಾರ ಏಪ್ರಿಲ್ 29 ಅಥವಾ 30 ರಂದು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯುವ ಸಾಧ್ಯತೆಯಿದೆ. ಈ ಸಭೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರನ್ನೂ ದೆಹಲಿಗೆ ಕರೆಯಿಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ. ಮೇ 10ರೊಳಗೆ ಒಂದು ಖಡಕ್ ತೀರ್ಮಾನಕ್ಕೆ ಬರಲೇಬೇಕು ಎಂದು ಡಿಕೆ ಸಹೋದರರು ಪಟ್ಟು ಹಿಡಿದಿರುವುದು ಹೈಕಮಾಂಡ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನನಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತೀರೋ ಅಥವಾ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಎಂದು ಶಿವಕುಮಾರ್ ಭಾವುಕರಾಗಿಯೇ ವಿನಂತಿಸಿದ್ದಾರೆ ಎನ್ನಲಾಗಿದೆ.
ನಿರ್ಣಾಯಕ ಹಂತಕ್ಕೆ ತಲುಪಿದ ರಾಜ್ಯ ರಾಜಕಾರಣ
ಪಂಚರಾಜ್ಯಗಳ ಚುನಾವಣೆ ಮತ್ತು ರಾಜ್ಯದ ಬಜೆಟ್ ಅಧಿವೇಶನಗಳೆಲ್ಲವೂ ಮುಗಿದಿರುವುದರಿಂದ, ಈಗ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ನಾಯಕತ್ವದ ಬಿಕ್ಕಟ್ಟನ್ನು ಬಗೆಹರಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯ ದಾಖಲೆಗಳು ಮತ್ತು ಡಿ.ಕೆ. ಶಿವಕುಮಾರ್ ಅವರ ಪಕ್ಷನಿಷ್ಠೆಯ ನಡುವೆ ಹೈಕಮಾಂಡ್ ಯಾವ ಸೂತ್ರವನ್ನು ಅನ್ವಯಿಸಲಿದೆ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ. ಮೇ ಮೊದಲ ವಾರದಲ್ಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗುವ ಮುನ್ಸೂಚನೆಗಳು ದಟ್ಟವಾಗಿವೆ.








