ಕನ್ನಡ ಚಿತ್ರರಂಗದ ಹೆಮ್ಮೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸದ್ಯ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಈ ಸಿನಿಮಾದ ಟೀಸರ್ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಪ್ರಚಾರದ ತುಣುಕುಗಳು ಕೆಲವರ ಟೀಕೆಗೆ ಗುರಿಯಾಗಿದ್ದವು. ವಿಶೇಷವಾಗಿ ಚಿತ್ರದ ಬೋಲ್ಡ್ ದೃಶ್ಯಗಳು ಮತ್ತು ಸಂಕೇತಗಳ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದವು. ಈ ಬಗ್ಗೆ ಅಮೆರಿಕದಲ್ಲಿ ನಡೆದ ಸಿನಿಮಾಕಾನ್ ಈವೆಂಟ್ ನಲ್ಲಿ ಯಶ್ ಅವರು ಅತ್ಯಂತ ಪ್ರಭಾವಶಾಲಿಯಾಗಿ ಉತ್ತರ ನೀಡಿದ್ದಾರೆ.
ಟಾಕ್ಸಿಕ್ ಕೇವಲ ಒಂದು ಸಾಮಾನ್ಯ ಆ್ಯಕ್ಷನ್ ಸಿನಿಮಾ ಅಲ್ಲ, ಇದೊಂದು ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್ ಎಂದು ಯಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮಹಿಳಾ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಈ ಸಿನಿಮಾದ ಅತಿ ದೊಡ್ಡ ವಿಶೇಷತೆ. ಸಾಮಾನ್ಯವಾಗಿ ಅಂಡರ್ ವರ್ಲ್ಡ್ ಅಥವಾ ಗ್ಯಾಂಗ್‌ಸ್ಟರ್ ಸಿನಿಮಾಗಳನ್ನು ಪುರುಷ ನಿರ್ದೇಶಕರೇ ನಿರ್ದೇಶಿಸುತ್ತಾರೆ ಎಂಬ ಇತಿಹಾಸವಿದೆ. ಆದರೆ ಗೀತು ಅವರು ಈ ಕಥೆಯನ್ನು ಒಬ್ಬ ಮಹಿಳೆಯ ದೃಷ್ಟಿಕೋನದಿಂದ ಅತ್ಯಂತ ಹೊಸತನದೊಂದಿಗೆ ಕಟ್ಟಿಕೊಟ್ಟಿದ್ದಾರೆ. ಒಬ್ಬ ಮಹಿಳೆ ಗ್ಯಾಂಗ್‌ಸ್ಟರ್ ಜಗತ್ತನ್ನು ಹೇಗೆ ನೋಡುತ್ತಾಳೆ ಎಂಬುದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಯಶ್ ವಿವರಿಸಿದ್ದಾರೆ.
ಟೀಸರ್‌ನಲ್ಲಿರುವ ಬೋಲ್ಡ್ ದೃಶ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರಿಗೆ ಯಶ್ ನೇರವಾಗಿಯೇ ಉತ್ತರಿಸಿದ್ದಾರೆ. ಗೀತು ಅವರು ಕಥೆಯನ್ನು ಹೆಣೆಯುವ ರೀತಿ ಮತ್ತು ಅದರಲ್ಲಿ ಭಾವನೆಗಳನ್ನು ಚಿತ್ರಿಸುವ ವಿಧಾನವೇ ವಿಭಿನ್ನವಾಗಿದೆ. ಒಬ್ಬ ಮಹಿಳೆ ಪ್ರಣಯ, ಬಯಕೆ ಅಥವಾ ಭಾವನೆಗಳನ್ನು ಎಷ್ಟು ಆಳವಾಗಿ ಮತ್ತು ವಿಭಿನ್ನವಾಗಿ ತೆರೆಯ ಮೇಲೆ ತರಬಲ್ಲರು ಎಂಬುದು ಈ ಚಿತ್ರದ ಚಿತ್ರೀಕರಣದ ವೇಳೆ ನನಗೆ ಅರಿವಾಯಿತು. ಇದು ಈವರೆಗಿನ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾಗಳಿಗಿಂತ ಬಹಳ ಭಿನ್ನವಾಗಿ ಮತ್ತು ಅರ್ಥಗರ್ಭಿತವಾಗಿ ಇರಲಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಬಿಡುಗಡೆಯಾದ ಇಂಟ್ರಡ್ಯೂಸಿಂಗ್ ರಾಯಾ ಎಂಬ ವೀಡಿಯೋ ತುಣುಕಿನಲ್ಲಿ ಸ್ಮಶಾನ, ಕಾರ್ ಮತ್ತು ಬಾಂಬ್ ಒಳಗೊಂಡ ದೃಶ್ಯಗಳು ವಿವಾದಕ್ಕೆ ಕಾರಣವಾಗಿದ್ದವು. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಷನ್ ದೂರು ದಾಖಲಿಸಿತ್ತು. ಇಂತಹ ಸಣ್ಣಪುಟ್ಟ ವಿರೋಧಗಳ ನಡುವೆಯೂ ಚಿತ್ರದ ಮೇಲಿರುವ ನಿರೀಕ್ಷೆ ಮಾತ್ರ ಕುಂದಿಲ್ಲ. ಯಶ್ ಅವರ ಅದ್ಭುತ ಸ್ಟೈಲಿಶ್ ಲುಕ್ ಮತ್ತು ವಿಭಿನ್ನ ಮೇಕಿಂಗ್ ಶೈಲಿಯಿಂದಾಗಿ ಟಾಕ್ಸಿಕ್ ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದೆ.
ಮೊದಲು 2025ರ ಮಾರ್ಚ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರವು ಕೆಲವು ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದೆ. ಈಗ ಅಧಿಕೃತ ಮಾಹಿತಿಯ ಪ್ರಕಾರ ಟಾಕ್ಸಿಕ್ ಸಿನಿಮಾ ಜೂನ್ 4 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಯಶ್ ಅವರ ಈ ಹೊಸ ಅವತಾರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.







