ದಾವಣಗೆರೆ: ಇಡೀ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಹೈವೋಲ್ಟೇಜ್ ಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಪರಾಜಯಗೊಳಿಸುವ ಮೂಲಕ ಚೊಚ್ಚಲ ಚುನಾವಣೆಯಲ್ಲೇ ಐತಿಹಾಸಿಕ ಜಯ ದಾಖಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸೃಷ್ಟಿಯಾಗಿದ್ದ ಆಂತರಿಕ ಬಿಕ್ಕಟ್ಟು ಮತ್ತು ಬಂಡಾಯದ ಭೀತಿಯ ನಡುವೆಯೂ ಸಮರ್ಥ್ ಶಾಮನೂರು 6,430 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವಿನೊಂದಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಕುಟುಂಬದ ರಾಜಕೀಯ ಹಿಡಿತ ಮತ್ತಷ್ಟು ಗಟ್ಟಿಯಾದಂತಾಗಿದೆ.
ಆರಂಭದಲ್ಲಿ ಆತಂಕ, ಅಂತ್ಯದಲ್ಲಿ ಅಬ್ಬರ
ದಾವಣಗೆರೆಯ ಡಿಆರ್ ಆರ್ ಶಾಲೆಯಲ್ಲಿ ನಡೆದ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮುನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದ್ದರು. ಆದರೆ 10 ಸುತ್ತುಗಳ ಮತ ಎಣಿಕೆ ಮುಕ್ತಾಯವಾಗುತ್ತಿದ್ದಂತೆ ಚಿತ್ರಣ ಸಂಪೂರ್ಣವಾಗಿ ಬದಲಾಯಿತು. 11ನೇ ಸುತ್ತಿನಿಂದ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡ ಸಮರ್ಥ್ ಶಾಮನೂರು, ಬಿಜೆಪಿಯ ತಂತ್ರಗಾರಿಕೆಯನ್ನು ಮೆಟ್ಟಿ ನಿಂತು ಅಂತಿಮವಾಗಿ ವಿಜಯದ ಮಾಲೆ ಧರಿಸಿದರು.
ಯುವ ನಾಯಕನಿಗೆ ಮತದಾರರ ಮಣೆ
ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದ ಸಮರ್ಥ್ ಶಾಮನೂರು ಅವರಿಗೆ ಈ ಗೆಲುವು ಹೊಸ ರಾಜಕೀಯ ಭವಿಷ್ಯವನ್ನು ಬರೆದಿದೆ. ಕ್ಷೇತ್ರದ ಮತದಾರರು ಹಿರಿಯರ ಅನುಭವದ ಜೊತೆಗೆ ಯುವ ನಾಯಕತ್ವಕ್ಕೆ ಹೆಚ್ಚಿನ ಪ್ರಾಶಸ್ತ ನೀಡಿದ್ದಾರೆ. ಬಿಜೆಪಿಯು ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ನಡೆಸಿದ್ದ ಸರ್ವ ಪ್ರಯತ್ನಗಳು ವಿಫಲವಾಗಿದ್ದು, ಕೈ ಕಾರ್ಯಕರ್ತರು ಜಿಲ್ಲಾದ್ಯಂತ ವಿಜಯೋತ್ಸವ ಆಚರಿಸಿದರು.








