ಚೆನ್ನೈ: ದ್ರಾವಿಡ ರಾಜಕಾರಣದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಮಹಾ ಬದಲಾವಣೆಗೆ ತಮಿಳುನಾಡು ಸಾಕ್ಷಿಯಾಗಿದೆ. ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಬ್ಬರದ ನಡುವೆ ಡಿಎಂಕೆ ಮತ್ತು ಎಐಡಿಎಂಕೆಯಂತಹ ಬಲಿಷ್ಠ ಪಕ್ಷಗಳು ಮಕಾಡೆ ಮಲಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಡಿಎಂಕೆ ಸರ್ವೋಚ್ಚ ನಾಯಕ ಎಂಕೆ ಸ್ಟಾಲಿನ್ ಅವರು ತಮ್ಮ ಸ್ವಕ್ಷೇತ್ರ ಕೊಳತ್ತೂರಿನಲ್ಲಿ ಸೋಲೊಪ್ಪಿಕೊಂಡಿರುವುದು ಇಡೀ ದೇಶದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಕೊಳತ್ತೂರಿನಲ್ಲಿ ಘಟಿಸಿದ ಪವಾಡ
ಕಳೆದ ಹಲವು ಚುನಾವಣೆಗಳಿಂದ ಎಂಕೆ ಸ್ಟಾಲಿನ್ ಅವರ ಅಜೇಯ ಭದ್ರಕೋಟೆಯಾಗಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಈ ಬಾರಿ ಟಿವಿಕೆ ಅಭ್ಯರ್ಥಿ ವಿಎಸ್ ಬಾಬು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಅಂತಿಮ ಸುತ್ತಿನ ಮತ ಎಣಿಕೆ ಮುಗಿಯುವ ಹೊತ್ತಿಗೆ ಸ್ಟಾಲಿನ್ ವಿರುದ್ಧ ಭಾರಿ ಅಂತರದ ಜಯ ದಾಖಲಿಸಿದ ಬಾಬು, ತಮಿಳುನಾಡು ರಾಜಕೀಯದ ಹೊಸ ಇತಿಹಾಸ ಬರೆದಿದ್ದಾರೆ. ಹಾಲಿ ಮುಖ್ಯಮಂತ್ರಿಯೊಬ್ಬರು ತಮ್ಮದೇ ಕ್ಷೇತ್ರದಲ್ಲಿ ಸೋತಿರುವುದು ಡಿಎಂಕೆ ಪಾಳಯಕ್ಕೆ ಅರಗಿಸಿಕೊಳ್ಳಲಾಗದ ತೀವ್ರ ಆಘಾತ ನೀಡಿದೆ. ದಶಕಗಳ ಕಾಲ ಡಿಎಂಕೆಯ ಹಿಡಿತದಲ್ಲಿದ್ದ ಈ ಕ್ಷೇತ್ರವೀಗ ವಿಜಯ್ ಸಾರಥ್ಯದ ಟಿವಿಕೆ ಪಾಲಾಗಿದೆ.
ಅಸ್ತಮಿಸಿದ ದ್ರಾವಿಡ ಸೂರ್ಯ: ಉದಯಿಸಿದ ದಳಪತಿ ಸಾಮ್ರಾಜ್ಯ
ದಶಕಗಳಿಂದ ತಮಿಳುನಾಡು ರಾಜಕಾರಣವನ್ನು ಹಂಚಿಕೊಂಡಿದ್ದ ಎರಡು ಪ್ರಮುಖ ದ್ರಾವಿಡ ಪಕ್ಷಗಳ ಅಧಿಪತ್ಯವನ್ನು ವಿಜಯ್ ಧೂಳೀಪಟ ಮಾಡಿದ್ದಾರೆ. ಬದಲಾವಣೆ ಈಗ ಅನಿವಾರ್ಯ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಕಣಕ್ಕೆ ಇಳಿದಿದ್ದ ವಿಜಯ್ ಅವರಿಗೆ ರಾಜ್ಯದ ಯುವ ಸಮುದಾಯ ಮತ್ತು ಮಹಿಳಾ ಮತದಾರರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಸ್ಟಾಲಿನ್ ಅವರಂತಹ ಅನುಭವಿ ನಾಯಕನನ್ನೇ ಸೋಲಿಸುವ ಮೂಲಕ ಟಿವಿಕೆ ರಾಜ್ಯದಲ್ಲಿ ಬದಲಿ ಶಕ್ತಿಯಾಗಿ ಹೊರಹೊಮ್ಮಿದೆ. ಸ್ಟಾಲಿನ್ ಸೋಲಿನ ಸುದ್ದಿ ಹರಡುತ್ತಿದ್ದಂತೆ ಡಿಎಂಕೆ ಕೇಂದ್ರ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ಸ್ಮಶಾನ ಮೌನ ಆವರಿಸಿದೆ.
ನಿಜ ಜೀವನದ ಸಿಕಂದರ್ ಆದ ದಳಪತಿ ವಿಜಯ್
ಕೇವಲ ಸಿನಿಮಾ ಪರದೆಯ ಮೇಲೆ ಅಬ್ಬರಿಸುತ್ತಿದ್ದ ವಿಜಯ್ ಈಗ ತಮಿಳುನಾಡಿನ ರಾಜಕೀಯ ರಂಗದಲ್ಲೂ ತಾನೇ ಅಧಿಪತಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಂಘಟನಾ ಚತುರತೆ ಮತ್ತು ಜನರ ನಾಡಿಮಿಡಿತ ಅರಿತ ವಿಜಯ್, ದ್ರಾವಿಡ ಪಕ್ಷಗಳ ಭ್ರಷ್ಟಾಚಾರ ಮತ್ತು ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಜನಾದೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಫಲಿತಾಂಶದ ಬೆನ್ನಲ್ಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ವಿಜಯ್ ಅಭಿಮಾನಿಗಳು ಮತ್ತು ಟಿವಿಕೆ ಕಾರ್ಯಕರ್ತರು ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ತಮಿಳುನಾಡು ರಾಜಕಾರಣದಲ್ಲಿ ಹೊಸ ಮನ್ವಂತರ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಆಡಳಿತ ಯಂತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ.








