ರಾಜಕೀಯ ಅಖಾಡದಲ್ಲಿ ಅಧಿಕಾರ ಮತ್ತು ಹಣ ಎರಡೂ ಕೈಜೋಡಿಸಿ ಸಾಗುವುದು ಇಂದಿನ ಕಾಲದ ವಾಸ್ತವ. ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ವಿಚಾರದಲ್ಲಿ ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಈಗ ದೀದಿ ಪಾಲಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನೀಡಿದ ದತ್ತಾಂಶಗಳ ಪ್ರಕಾರ ಮಮತಾ ಬ್ಯಾನರ್ಜಿ ಅವರ ಒಟ್ಟು ಆಸ್ತಿಯ ಮೌಲ್ಯ ಇಡೀ ದೇಶದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಲಕ್ಷಗಳಲ್ಲಿದೆ ಮುಖ್ಯಮಂತ್ರಿಯ ಆಸ್ತಿ ವಿವರ
ಸುಮಾರು ಮೂರು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ಚುನಾವಣಾ ಅಫಿಡವಿಟ್ನಲ್ಲಿ ಕೇವಲ 15.37 ಲಕ್ಷ ರೂಪಾಯಿ ಮೊತ್ತದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಅಚ್ಚರಿಯ ವಿಷಯವೆಂದರೆ 2021ರಲ್ಲಿ 16.72 ಲಕ್ಷ ರೂಪಾಯಿ ಹೊಂದಿದ್ದ ಅವರ ಆಸ್ತಿ ಈಗ ಮತ್ತಷ್ಟು ಇಳಿಕೆಯಾಗಿದೆ. ಅವರ ಬಳಿ ಇರುವ ನಗದು ಕೇವಲ 75,700 ರೂಪಾಯಿಗಳು ಮಾತ್ರ. ಇನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 12.76 ಲಕ್ಷ ರೂಪಾಯಿ ಉಳಿತಾಯವಿದೆ.
ಮಹಿಳೆಯರಿಗೆ ಸಾಮಾನ್ಯವಾಗಿ ಒಡವೆಗಳ ಮೇಲೆ ಮೋಹ ಹೆಚ್ಚು. ಆದರೆ ಬಂಗಾಳದ ದೀದಿ ಅವರ ಬಳಿ ಇರುವುದು ಕೇವಲ 9.75 ಗ್ರಾಂ ಚಿನ್ನಾಭರಣಗಳು ಮಾತ್ರ. ಇದರ ಮೌಲ್ಯ ಅಂದಾಜು 1.45 ಲಕ್ಷ ರೂಪಾಯಿ ಎನ್ನಲಾಗಿದೆ. ಅವರ ವಾರ್ಷಿಕ ಆದಾಯದ ಮೇಲೆ ಕಣ್ಣು ಹಾಯಿಸಿದರೆ 2024-25ರ ಹಣಕಾಸು ವರ್ಷದಲ್ಲಿ ಅದು 23.21 ಲಕ್ಷ ರೂಪಾಯಿಗಳಷ್ಟಿದೆ. ಕಳೆದ ಬಾರಿಗಿಂತ ಅವರ ಆದಾಯದಲ್ಲಿ ಸ್ವಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.
ಇಂದಿನ ಕಾಲದಲ್ಲಿ ಪಂಚಾಯತ್ ಸದಸ್ಯರಾದರೂ ದೊಡ್ಡ ಮನೆ ಮತ್ತು ಕಾರುಗಳನ್ನು ಹೊಂದುವ ಆಸೆ ಇರುತ್ತದೆ. ಆದರೆ ಬಂಗಾಳದ ಮುಖ್ಯಮಂತ್ರಿಯಾಗಿ ಸತತ ಮೂರನೇ ಅವಧಿಗೆ ಅಧಿಕಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಅವರ ಹೆಸರಿನಲ್ಲಿ ಒಂದು ಸಣ್ಣ ಸೈಟು ಅಥವಾ ಸ್ವಂತ ಮನೆ ಇಲ್ಲ. ಅಷ್ಟೇ ಅಲ್ಲ ಯಾವುದೇ ಸ್ವಂತ ವಾಹನವನ್ನೂ ಅವರು ಹೊಂದಿಲ್ಲ. ಇಂದಿಗೂ ಅವರು ಕೋಲ್ಕತ್ತಾದ ಹಳೆಯ ಮನೆಯಲ್ಲೇ ವಾಸಿಸುತ್ತಾ ಸರಳ ಜೀವನ ನಡೆಸುತ್ತಿದ್ದಾರೆ.
ಒಂದು ಕಡೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು 900 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದರೆ ಮತ್ತೊಂದು ಕಡೆ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷದ ಒಡತಿಯಾಗಿದ್ದಾರೆ. ದೇಶದ ಬಹುತೇಕ ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದರೂ ಮಮತಾ ಬ್ಯಾನರ್ಜಿ ಅವರ ಈ ಸರಳತೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರವಿದ್ದರೂ ಆಸ್ತಿ ಮಾಡದ ಅವರ ಈ ನಡೆ ಅವರ ಅಭಿಮಾನಿಗಳಲ್ಲಿ ಹೆಮ್ಮೆಯ ಭಾವನೆ ಮೂಡಿಸಿದೆ.








