ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ದರೋಡೆ ನಡೆಯುತ್ತಿದೆ. ಅದು ಕತ್ತಿ ಹಿಡಿದು ಮಾಡುವ ದರೋಡೆಯಲ್ಲ, ಬದಲಿಗೆ ರಸ್ತೆಯಲ್ಲಿ ಮೊಳೆಗಳನ್ನು ಚೆಲ್ಲಿ ವಾಹನ ಸವಾರರ ಜೀವದ ಜೊತೆ ಚೆಲ್ಲಾಟವಾಡುವ ಕುಖ್ಯಾತ ಪಂಕ್ಚರ್ ಮಾಫಿಯಾದ ಕೃತ್ಯ. ಸಾರ್ವಜನಿಕರ ಹಿತರಕ್ಷಣೆ ಮಾಡಬೇಕಾದ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಈ ದಂಧೆಕೋರರು ತಮ್ಮ ಕೈಚಳಕ ತೋರಿರುವುದು ಇಡೀ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ.
ಈ ಮಾಫಿಯಾದ ಧೈರ್ಯ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಕಾನೂನಿನ ಭಯವೇ ಇಲ್ಲದಂತೆ ಪೊಲೀಸ್ ಠಾಣೆಯ ಎದುರಿನ ರಸ್ತೆಯಲ್ಲೇ ನೂರಾರು ಚೂಪಾದ ಮೊಳೆಗಳನ್ನು ಉದ್ದೇಶಪೂರ್ವಕವಾಗಿ ಹರಡಲಾಗಿದೆ. ಈ ದಂಧೆಕೋರರ ಕಾರ್ಯವೈಖರಿ ಅತ್ಯಂತ ಭೀಕರವಾಗಿದೆ. ತಡರಾತ್ರಿ ಯಾರು ಇಲ್ಲದ ಸಮಯದಲ್ಲಿ ಮುಖ್ಯ ರಸ್ತೆಗಳಲ್ಲಿ ಮೊಳೆಗಳನ್ನು ಚೆಲ್ಲುತ್ತಾರೆ. ಆ ದಾರಿಯಲ್ಲಿ ಸಾಗುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಟೈರ್‌ಗಳು ಪಂಕ್ಚರ್ ಆಗಿ ಸವಾರರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಸರಿಯಾಗಿ ಅದೇ ಸಮಯದಲ್ಲಿ ಸವಾರರಿಗೆ ಕಾಣುವಂತೆ ಹತ್ತಿರದಲ್ಲೇ ಈ ಮಾಫಿಯಾಕ್ಕೆ ಸೇರಿದ ಪಂಕ್ಚರ್ ಅಂಗಡಿಗಳು ಸಿದ್ಧವಾಗಿರುತ್ತವೆ. ಅಸಹಾಯಕ ಸ್ಥಿತಿಯಲ್ಲಿ ಅಲ್ಲಿಗೆ ಹೋಗುವ ಸವಾರರಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡಲಾಗುತ್ತದೆ. ಸಣ್ಣ ಪಂಕ್ಚರ್‌ಗೆ ಟೈರ್ ಬದಲಾಯಿಸಬೇಕು ಎಂದು ಸುಳ್ಳು ಹೇಳಿ ಮುಗ್ಧ ಜನರನ್ನು ಲೂಟಿ ಮಾಡುವುದು ಈ ಜಾಲದ ದೈನಂದಿನ ಕೆಲಸವಾಗಿದೆ.
ಈ ಘೋರ ದಂಧೆಯ ಕುರಿತು ಕರ್ನಾಟಕ ಪೋರ್ಟ್‌ಫೋಲಿಯೋ ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದು ಹಂಚಿಕೊಳ್ಳಲಾಗಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಸತತ ಗಸ್ತು ಇರುವ ಪ್ರದೇಶಗಳಲ್ಲೇ ಇಂತಹ ಕೃತ್ಯಗಳು ನಡೆಯುತ್ತಿರುವುದು ಇಲಾಖೆಯ ಕಾರ್ಯಕ್ಷಮತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕೇವಲ ಹಣದ ಲೂಟಿ ಮಾತ್ರವಲ್ಲದೆ, ವೇಗವಾಗಿ ಚಲಿಸುವ ವಾಹನಗಳ ಟೈರ್ ಅನಿರೀಕ್ಷಿತವಾಗಿ ಪಂಕ್ಚರ್ ಆದರೆ ಭೀಕರ ಅಪಘಾತಗಳು ಸಂಭವಿಸಿ ಜೀವಹಾನಿಯಾಗುವ ಸಾಧ್ಯತೆಯೂ ಹೆಚ್ಚಿದೆ.
ಈ ಕೂಡಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಈ ಪಂಕ್ಚರ್ ಮಾಫಿಯಾದ ಕಿಂಗ್‌ಪಿನ್‌ಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳು ಸವಾರರಿಗೆ ಸುರಕ್ಷಿತವಾಗಿರಬೇಕೇ ಹೊರತು ಸುಲಿಗೆಕೋರರ ಅಡ್ಡೆಯಾಗಬಾರದು ಎನ್ನುವುದು ಪ್ರತಿಯೊಬ್ಬ ನಾಗರಿಕನ ಆಶಯವಾಗಿದೆ.








