ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದಲ್ಲಿ ಹೊಸ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆದಿದ್ದು, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಧಾರಗಳ ಕುರಿತು ಚರ್ಚೆ ನಡೆದಿದೆ ಎಂದು ಸಚಿವ ಸಿಟಿಆರ್ ನಿರ್ಮಲ್ ಕುಮಾರ್ ತಿಳಿಸಿದ್ದಾರೆ.
‘ವೆಟ್ರಿ ತಮಿಳಗಂ’ (ವಿಜಯಶಾಲಿ ತಮಿಳುನಾಡು) ಎಂಬ ಬ್ಯಾನರ್ ಅಡಿಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ 436 ಯೋಜನೆಗಳನ್ನು ಮುಂದಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಟಿಆರ್ ನಿರ್ಮಲ್ ಕುಮಾರ್, ಮುಖ್ಯಮಂತ್ರಿ ವಿಜಯ್ ಶೀಘ್ರದಲ್ಲೇ ಈ ಯೋಜನೆಗಳ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದರು. ಜೊತೆಗೆ ವಿವಿಧ ಇಲಾಖೆಗಳ ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳು, ಮೂಲಸೌಕರ್ಯ ವಿಸ್ತರಣೆ, ಉದ್ಯೋಗ ಸೃಷ್ಟಿ ಹಾಗೂ ಜನಪರ ಕಾರ್ಯಕ್ರಮಗಳ ಕುರಿತೂ ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸ ಸರ್ಕಾರದ ಮೊದಲ ಸಂಪುಟ ಸಭೆಯಲ್ಲೇ ನೂರಾರು ಯೋಜನೆಗಳ ಕುರಿತು ಚರ್ಚೆ ನಡೆದಿರುವುದು ತಮಿಳುನಾಡಿನ ಆಡಳಿತದಲ್ಲಿ ಹೊಸ ದಿಕ್ಕಿನ ನಿರೀಕ್ಷೆಯನ್ನು ಮೂಡಿಸಿದ್ದು, ಮುಖ್ಯಮಂತ್ರಿ ವಿಜಯ್ ಅವರ ಮುಂದಿನ ಘೋಷಣೆಗಳತ್ತ ರಾಜ್ಯದ ಜನರ ಗಮನ ಕೇಂದ್ರೀಕೃತವಾಗಿದೆ.







