ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಈ ಯೋಜನೆಗೆ ಈಗ ದಿಢೀರ್ ಆಗಿ ಜಾತಿ ಮತ್ತು ಆದಾಯದ ಲೆಕ್ಕಾಚಾರ ಶುರುವಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಫಲಾನುಭವಿಗಳ ಪುನರ್ ಪರಿಶೀಲನೆ ನೆಪದಲ್ಲಿ ಸರ್ಕಾರ ಹೊಸ ಷರತ್ತುಗಳನ್ನು ಹೇರುತ್ತಿರುವುದು ಈಗ ರಾಜಕೀಯ ಸಮರಕ್ಕೂ ಕಾರಣವಾಗಿದೆ.
ಮನೆ ಮನೆಗೆ ಎಸ್ಕಾಂ ಸಿಬ್ಬಂದಿ: ಹೊಸ ದಾಖಲೆಗಳ ಭರಾಟೆ
ಜುಲೈ 1ರಿಂದಲೇ ರಾಜ್ಯಾದ್ಯಂತ ಎಸ್ಕಾಂ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಗೃಹಜ್ಯೋತಿ ಫಲಾನುಭವಿಗಳ ಮಾಹಿತಿ ಕಲೆಹಾಕುತ್ತಿದ್ದಾರೆ. ಆದರೆ ಈ ಬಾರಿ ಕೇವಲ ಆಧಾರ್ ಕಾರ್ಡ್ ಅಥವಾ ವಿದ್ಯುತ್ ಬಿಲ್ ನೀಡಿದರೆ ಸಾಲದು. ಅದರ ಜೊತೆಗೆ ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಮುಖ್ಯವಾಗಿ ಜಾತಿ ಪ್ರಮಾಣಪತ್ರವನ್ನು ನೀಡಬೇಕು ಎಂಬ ನಿಯಮ ಜಾರಿಗೆ ಬಂದಿರುವುದು ಜನರನ್ನು ಕಂಗಾಲಾಗಿಸಿದೆ. ಉಚಿತ ವಿದ್ಯುತ್ ಪಡೆಯಲು ಜಾತಿಯ ಹಂಗೇಕೆ ಎಂಬ ಪ್ರಶ್ನೆ ಈಗ ಮನೆಮನೆಗಳಲ್ಲಿ ಕೇಳಿಬರುತ್ತಿದೆ.
ಇದ್ಯಾವ ಸೀಮೆ ಗ್ಯಾರಂಟಿ? ಆರ್ ಅಶೋಕ್ ತೀವ್ರ ವಾಗ್ದಾಳಿ
ಸರ್ಕಾರದ ಈ ನಡೆಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಕೂಗಿದ್ದ ಕಾಂಗ್ರೆಸ್ ನಾಯಕರು, ಈಗ ಅಧಿಕಾರಕ್ಕೆ ಬಂದ ಮೇಲೆ ಜನರ ಜಾತಿ ಮತ್ತು ಆದಾಯ ಹುಡುಕುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಉಚಿತ ವಿದ್ಯುತ್ ನೀಡಲು ಪ್ಯಾನ್ ಕಾರ್ಡ್ ಮತ್ತು ಜಾತಿ ಪ್ರಮಾಣಪತ್ರದ ಅಗತ್ಯವೇನಿದೆ ಎಂದು ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸುವ ಹುನ್ನಾರ?
ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದ, ಹೇಗಾದರೂ ಮಾಡಿ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಈ ಹೊಸ ಸ್ಕೆಚ್ ಹಾಕಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರನ್ನು ಯೋಜನೆಯಿಂದ ಹೊರದಬ್ಬಲು ಇಂತಹ ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ರಾಜ್ಯದ ನಿವಾಸಿಗಳು ಎಂದು ಗುರುತಿಸಲು ಆಧಾರ್ ಅಥವಾ ವೋಟರ್ ಐಡಿ ಸಾಕಿರುವಾಗ, ಜನರ ಜಾತಿ ಕೇಳುತ್ತಿರುವುದು ಜನವಿರೋಧಿ ನೀತಿಯಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಯೂ ಟರ್ನ್ ಸರ್ಕಾರಕ್ಕೆ ಜನರ ಎಚ್ಚರಿಕೆ
ಯಾವುದೇ ಷರತ್ತುಗಳಿಲ್ಲದೆ 200 ಯೂನಿಟ್ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿ ಈಗ ಉಲ್ಟಾ ಹೊಡೆಯುತ್ತಿರುವ ಈ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಬಡವರ ಹಕ್ಕನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ ಎಂದು ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಜಾತಿ ಮತ್ತು ಆದಾಯದ ಆಧಾರದ ಮೇಲೆ ಅರ್ಹತೆ ನಿರ್ಧರಿಸಲು ಹೊರಟಿರುವ ಸರ್ಕಾರದ ಈ ನಿರ್ಧಾರವು ಗೃಹಜ್ಯೋತಿ ಯೋಜನೆಯ ಅಡಿಪಾಯವನ್ನೇ ಅಲುಗಾಡಿಸುತ್ತಿದೆ.
ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಯು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ಕಾರಣವಾಗುವ ಮುನ್ಸೂಚನೆ ನೀಡಿದೆ. ಸರ್ಕಾರ ಈ ಗೊಂದಲಕ್ಕೆ ಶೀಘ್ರವೇ ತೆರೆ ಎಳೆಯದಿದ್ದರೆ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.








