ಗರ್ಭಿಣಿಯಾಗಿದ್ದಾಗ ಪತಿ ತನಗೆ ಫಿಂಗರ್ ಚಿಪ್ಸ್ ಮತ್ತು ಮಾಂಸದೂಟ ತಿನ್ನಲು ಬಿಡಲಿಲ್ಲ ಎಂಬ ವಿಚಿತ್ರ ಕಾರಣ ನೀಡಿ ಪತ್ನಿಯೊಬ್ಬಳು ತನ್ನ ಎನ್ಆರ್ಐ ಪತಿಯ ಮೇಲೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಪ್ರಕರಣದ ವಿವರಗಳನ್ನು ಕೇಳಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಇದು ಕಾನೂನಿನ ದುರ್ಬಳಕೆಯ ಪರಮಾವಧಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ನಿ ತನ್ನ ದೂರಿನಲ್ಲಿ, ಗರ್ಭಾವಸ್ಥೆಯಲ್ಲಿದ್ದಾಗ ಪತಿ ನನಗೆ ಫಿಂಗರ್ ಚಿಪ್ಸ್, ಮಾಂಸ ಮತ್ತು ಅನ್ನ ತಿನ್ನಲು ನಿಷೇಧ ಹೇರಿದ್ದರು. ಇದರಿಂದಾಗಿ ಹೆರಿಗೆಯ ಸಮಯದಲ್ಲಿ ನನಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಂಡಿತು ಎಂದು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ದೂರು ದಾಖಲಿಸಿದ್ದರು. ಈ ವಿಚಿತ್ರ ಆರೋಪಗಳನ್ನು ಗಮನಿಸಿದ ನ್ಯಾಯಾಧೀಶರು, ಏನ್ರೀ ಇದು ತಮಾಷೆ ಮಾಡುತ್ತಿದ್ದೀರಾ? ಇಂತಹ ಸಣ್ಣ ಪುಟ್ಟ ವಿಚಾರಗಳನ್ನೆಲ್ಲಾ ದೊಡ್ಡದು ಮಾಡಿ ಕಾನೂನನ್ನು ಈ ರೀತಿ ಬಳಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಪತ್ನಿ ಹಾಕಿದ್ದ ಈ ಕೇಸಿನಿಂದಾಗಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಪತಿಗೆ ಅಲ್ಲಿಗೆ ಮರಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಆತ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದನು. ಸೆಕ್ಷನ್ 498ಎ ಎನ್ನುವುದು ಮಹಿಳೆಯರ ರಕ್ಷಣೆಗಾಗಿ ಇರುವುದೇ ಹೊರತು, ಈ ರೀತಿಯ ಕ್ಷುಲ್ಲಕ ಕಾರಣಗಳಿಗಾಗಿ ಗಂಡನ ವೃತ್ತಿಜೀವನ ಹಾಳು ಮಾಡಲು ಅಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸದ್ಯ ಪತಿಯ ಮೇಲಿನ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದ್ದು, ಆತನಿಗೆ ತಕ್ಷಣವೇ ವಿದೇಶಕ್ಕೆ ತೆರಳಲು ಹಸಿರು ನಿಶಾನೆ ತೋರಿಸಿದೆ.








