ಬೆಂಗಳೂರು : ಮನೆಯಲ್ಲಿ ನಾಯಿ ಸಾಕುವ ಹವ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ನಿಮ್ಮ ಪ್ರೀತಿಯ ಸಾಕುನಾಯಿ ಬೇರೆಯವರ ಮೇಲೆ ದಾಳಿ ಮಾಡಿದರೆ ಅಥವಾ ಕಚ್ಚಿದರೆ ಅದಕ್ಕೆ ನೀವೇ ನೇರ ಹೊಣೆಗಾರರಾಗುತ್ತೀರಿ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡುವ ಮೂಲಕ ನಾಯಿ ಮಾಲೀಕರಿಗೆ ಬಿಸಿ ಮುಟ್ಟಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ. ಪ್ರಾಣಿಗಳನ್ನು ಸಾಕುವವರು ಅವುಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕು. ಮಾಲೀಕರ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅಥವಾ ಯಾರಿಗಾದರೂ ಗಾಯಗಳಾದರೆ ಅದನ್ನು ಕಾನೂನುಬದ್ಧವಾಗಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನಾಯಿ ಕಡಿತಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಲೀಕರ ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಘಟನೆಗೆ ಸಂಬಂಧಿಸಿದಂತೆ ಮಾಲೀಕರ ನಿರ್ಲಕ್ಷ್ಯವಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ ಮತ್ತು ಮಾನವೀಯತೆಯ ದೃಷ್ಟಿಯಿಂದ ಸಂತ್ರಸ್ತರಿಗೆ ವೈದ್ಯಕೀಯ ವೆಚ್ಚವನ್ನು ಭರಿಸಲಾಗಿದೆ ಎಂದು ವಾದಿಸಿದರು.
ಆದರೆ ಈ ವಾದಗಳನ್ನು ತಳ್ಳಿಹಾಕಿದ ನ್ಯಾಯಪೀಠವು, ಹಣ ಕೊಟ್ಟಾಕ್ಷಣ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಜಾಗ್ರತೆಯಿಂದ ನಾಯಿ ಸಾಕುವುದು ಪ್ರತಿಯೊಬ್ಬ ಮಾಲೀಕನ ಕನಿಷ್ಠ ಕರ್ತವ್ಯ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ನೆರೆಹೊರೆಯವರಿಗೆ ನಾಯಿಯಿಂದ ಅಪಾಯ ಉಂಟಾಗದಂತೆ ನೋಡಿಕೊಳ್ಳುವುದು ಮಾಲೀಕರ ಜವಾಬ್ದಾರಿ. ಇದರಲ್ಲಿ ನಿರ್ಲಕ್ಷ್ಯ ವಹಿಸಿ ಇತರರ ಪ್ರಾಣಕ್ಕೆ ಅಥವಾ ಆರೋಗ್ಯಕ್ಕೆ ಹಾನಿ ಉಂಟುಮಾಡಿದರೆ ಅದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಕಟ್ಟುನಿಟ್ಟಾಗಿ ಹೇಳಿದೆ.
ಈ ಆದೇಶದ ಮೂಲಕ ರಾಜ್ಯದ ಎಲ್ಲಾ ಸಾಕುಪ್ರಾಣಿ ಮಾಲೀಕರಿಗೆ ನ್ಯಾಯಾಲಯವು ಒಂದು ಸ್ಪಷ್ಟ ಸಂದೇಶ ರವಾನಿಸಿದೆ. ನಾಯಿಗಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಲೀಶ್ ಬಳಸುವುದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಾಯಿ ಕಚ್ಚಿ ದೂರು ದಾಖಲಾದರೆ, ಮಾಲೀಕರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಮತ್ತು ಜೈಲು ಶಿಕ್ಷೆ ಅಥವಾ ಭಾರಿ ದಂಡ ತೆರಬೇಕಾಗಬಹುದು.
ಹೀಗಾಗಿ ಇನ್ಮುಂದೆ ನಿಮ್ಮ ಸಾಕುನಾಯಿಗಳ ಬಗ್ಗೆ ಅತೀವ ಜಾಗರೂಕತೆ ವಹಿಸಿ. ನಿಮ್ಮ ಒಂದು ಸಣ್ಣ ನಿರ್ಲಕ್ಷ್ಯ ನಿಮ್ಮನ್ನು ನ್ಯಾಯಾಲಯದ ಮೆಟ್ಟಿಲೇರಿಸಬಹುದು ಎಂಬ ಎಚ್ಚರಿಕೆ ಇರಲಿ.








